IND vs ENG: 10 ವರ್ಷಗಳಲ್ಲೇ ಅತ್ಯಂತ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾ
India vs England 4th Test: ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ನ ನಾಲ್ವರು ಅರ್ಧಶತಕ ಬಾರಿಸಿದರೆ, ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ 544 ರನ್ಗಳೊಂದಿಗೆ ಬ್ಯಾಟಿಂಗ್ ಮುಂದುವರೆಸಿದೆ.

ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 358 ರನ್ ಕಲೆಹಾಕಿತು. ಇದಕ್ಕೆ ಪ್ರತ್ಯುತ್ತರವಾಗಿ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.
ಆರಂಭಿಕರಾದ ಝಾಕ್ ಕ್ರಾಲಿ (84) ಹಾಗೂ ಬೆನ್ ಡಕೆಟ್ (94) ಆಕರ್ಷಕ ಅರ್ಧಶತಕ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲೀ ಪೋಪ್ 77 ರನ್ ಗಳಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೋ ರೂಟ್ ಭರ್ಜರಿ ಶತಕದೊಂದಿಗೆ 150 ರನ್ಗಳ ಇನಿಂಗ್ಸ್ ಆಡಿದರು. ಆ ಬಳಿಕ ಬಂದ ಬೆನ್ ಸ್ಟೋಕ್ಸ್ ಅಜೇಯ 77 ರನ್ ಗಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 544 ರನ್ಗಳಿಸಿದೆ.
10 ವರ್ಷಗಳ ಬಳಿಕ ಕಳಪೆ ಬೌಲಿಂಗ್:
ವಿಶೇಷ ಎಂದರೆ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ವಿರುದ್ಧ ವಿದೇಶಿ ಟೆಸ್ಟ್ನಲ್ಲಿ ತಂಡವೊಂದು 500+ ರನ್ ಕಲೆಹಾಕಿದೆ. ಅಂದರೆ ಕೊನೆಯ ಬಾರಿ ಭಾರತ ತಂಡವು ವಿದೇಶಿ ಟೆಸ್ಟ್ನಲ್ಲಿ 500+ ರನ್ ನೀಡಿದ್ದು 2015 ರಲ್ಲಿ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು 572 ರನ್ ನೀಡಿದ್ದರು.
ಇದಾದ ಬಳಿಕ 2016 ರಿಂದ ಟೀಮ್ ಇಂಡಿಯಾ ಒಮ್ಮೆಯೂ ವಿದೇಶಿ ಟೆಸ್ಟ್ನಲ್ಲಿ 500+ ರನ್ ನೀಡಿರಲಿಲ್ಲ. ಆದರೆ ಈ ಬಾರಿ 544* ರನ್ ಕಲೆಹಾಕುವುದರೊಂದಿಗೆ ಟೀಮ್ ಇಂಡಿಯಾದ ದಶಕದ ಪಾರುಪತ್ಯಕ್ಕೆ ಇಂಗ್ಲೆಂಡ್ ತೆರೆ ಎಳೆದಿದೆ. ಈ ಮೂಲಕ ಬೃಹತ್ ಮೊತ್ತದತ್ತ ಆಂಗ್ಲ ಪಡೆ ಮುನ್ನುಗ್ಗಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜೇಮಿ ಸ್ಮಿತ್ (ವಿಕೆಟ್ ಕೀಪರ್) , ಲಿಯಾಮ್ ಡಾಸನ್ , ಕ್ರಿಸ್ ವೋಕ್ಸ್ , ಬ್ರೈಡನ್ ಕಾರ್ಸ್ , ಜೋಫ್ರಾ ಆರ್ಚರ್.
ಇದನ್ನೂ ಓದಿ: 11 ಭರ್ಜರಿ ಸಿಕ್ಸ್, 6 ಫೋರ್: ಶರವೇಗದ ಶತಕ ಸಿಡಿಸಿ ಭರ್ಜರಿ ದಾಖಲೆ ಬರೆದ ಟಿಮ್ ಡೇವಿಡ್
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ಶುಭಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಶಾರ್ದೂಲ್ ಠಾಕೂರ್ , ಅನ್ಶುಲ್ ಕಂಬೋಜ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
