ಭಾರತ ಹಾಗೂ ಇಂಗ್ಲೆಂಡ್ ನಡುವೆ ಇದೇ ತಿಂಗಳ 23 ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಇದೀಗ ಈ ಸರಣಿಗೆ ಭಾರತ ಟಿ20 ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಎಂದಿನಂತೆ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಉಪನಾಯಕತ್ವವನ್ನು ಸಂಜು ಸ್ಯಾಮ್ಸನ್ ಬದಲಿಗೆ ಅಕ್ಷರ್ ಪಟೇಲ್ಗೆ ವಹಿಸಲಾಗಿದೆ. ಇದಲ್ಲದೆ ಬರೋಬ್ಬರಿ 2 ವರ್ಷಗಳ ಬಳಿಕ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಟೀಂ ಇಂಡಿಯಾ ಮಾತ್ರವಲ್ಲದೆ ಈ ಸರಣಿಗೆ ಇಂಗ್ಲೆಂಡ್ ತಂಡವನ್ನು ಸಹ ಈಗಾಗಲೇ ಪ್ರಕಟಿಸಲಾಗಿದೆ.
ಭಾರತ ಟಿ20 ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲದಿದ್ದರೂ, ಅನುಭವಿ ವಿಕೆಟ್ ಕೀಪರ್ ರಿಷಬ್ ಪಂತ್ ಈ ಸರಣಿಗೆ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿ ಧ್ರುವ್ ಜುರೆಲ್ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಇನ್ ಫಾರ್ಮ್ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಆಗಿ ಮೊದಲ ಆಯ್ಕೆಯಾಗಲಿದ್ದಾರೆ. ರಿಷಬ್ ಪಂತ್ ಅಲ್ಲದೇ ಶುಭ್ಮನ್ ಗಿಲ್‌ಗೂ ಅವಕಾಶ ಸಿಕ್ಕಿಲ್ಲ. ಆದರೆ ಈ ಇಬ್ಬರು ಆಟಗಾರರನ್ನು ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೊಫಿಗೆ ಆಯ್ಕೆ ಮಾಡುವ ಸಲುವಾಗಿ ಟಿ20 ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮಿ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ