
ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ (Anderson-Tendulkar Trophy) ಎಂದು ಹೊಸದಾಗಿ ಹೆಸರಿಡಲಾಗಿದೆ. ಈ ಹಿಂದೆ ಈ ಸರಣಿಯನ್ನು ಪಟೌಡಿ ಟ್ರೋಫಿ (Pataudi Trophy) ಎಂದು ಕರೆಯಲಾಗುತ್ತಿತ್ತು. ಇಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ಮಂಡಳಿಯ ಈ ತೀರ್ಮಾನದಿಂದ ಪಟೌಡಿಯ ಪರಂಪರೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದೆ. ಅಲ್ಲದೆ ಟ್ರೋಫಿ ಹೆಸರನ್ನು ಬದಲಾಗಿಸಿದೆಯಾದರೂ, ಈ ಸರಣಿಯನ್ನು ಗೆದ್ದ ತಂಡದ ನಾಯಕನಿಗೆ ಪಟೌಡಿ ಪದಕವನ್ನು ನೀಡುವ ಮೂಲಕ ಪಟೌಡಿಯವರನ್ನು ಈ ಮುಖಾಂತರ ಸ್ಮರಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಇನ್ನು ಮುಂದೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಟೆಸ್ಟ್ ಸರಣಿಯನ್ನು ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದು ಕರೆಯಲಾಗುವುದು. ಈ ಹಿಂದೆ ಎರಡು ತಂಡಗಳ ನಡುವೆ ನಡೆಯುವ ಈ ಸರಣಿಯನ್ನು ಪಡೌಟಿ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯನ್ನು ಪಟೌಡಿ ಟ್ರೋಫಿಗಾಗಿ ಆಡಲಾಗಿತ್ತು. ಇದಕ್ಕೆ ಇಫ್ತಿಕರ್ ಅಲಿ ಖಾನ್ ಪಟೌಡಿ ಮತ್ತು ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಹೆಸರಿಡಲಾಗಿತ್ತು. ಮಾರ್ಚ್‌ನಲ್ಲಿ, ಇಸಿಬಿ ಪಟೌಡಿ ಕುಟುಂಬಕ್ಕೆ ಟ್ರೋಫಿಯನ್ನು ನಿವೃತ್ತಿಗೊಳಿಸಲು ಬಯಸುವುದಾಗಿ ಪತ್ರ ಬರೆದಿತ್ತು. ಇದೀಗ ಈ ಟ್ರೋಫಿಗೆ ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಎಂದು ಮರುನಾಮಕರಣ ಮಾಡಲಾಗಿದೆ.
ಇನ್ನು ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಆಂಡರ್ಸನ್ ಟ್ರೋಫಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜೇಮ್ಸ್ ಆಂಡರ್ಸನ್, ‘ಈ ಪ್ರತಿಷ್ಠಿತ ಸರಣಿಗೆ ಸಚಿನ್ ಮತ್ತು ನನ್ನ ಹೆಸರಿಡಲಾಗಿರುವುದರಿಂದ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಎರಡು ದೇಶಗಳ ನಡುವಿನ ಪೈಪೋಟಿ ಯಾವಾಗಲೂ ವಿಶೇಷವಾದದ್ದು, ಇದು ಮರೆಯಲಾಗದ ಕ್ಷಣಗಳಿಂದ ತುಂಬಿದೆ ಎಂದರು.
ಈ ಬಗ್ಗೆ ಮಾತನಾಡಿದ ಸಚಿನ್ ತೆಂಡೂಲ್ಕರ್, ನನಗೆ ಟೆಸ್ಟ್ ಕ್ರಿಕೆಟ್ ಜೀವನದ ಸಂಕೇತವಾಗಿದೆ. ಇಲ್ಲಿ ನೀವು ನಿಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತೀರಿ. ಒಂದು ವೇಳೆ ಈ ಮಾದರಿಯಲ್ಲಿ ನೀವು ಎಡವಿದರೆ, ಇದು ನಿಮಗೆ ತಪ್ಪುಗಳನ್ನು ತಿದ್ದಿಕೊಳ್ಳಲು, ಯೋಚಿಸಲು ಮತ್ತೊಂದು ದಿನವನ್ನು ನೀಡುತ್ತದೆ. ಇದು ಎಲ್ಲಾ ಪ್ರತಿಕೂಲಗಳ ವಿರುದ್ಧ ಸಹಿಷ್ಣುತೆ, ಶಿಸ್ತು ಮತ್ತು ಹೊಂದಿಕೊಳ್ಳುವಿಕೆಯನ್ನು ಕಲಿಸುವ ಆಟದ ಅತ್ಯುನ್ನತ ರೂಪವಾಗಿದೆ. ನಾನು ನಿರಾಶೆಯಿಂದ ವಿಜಯಗಳಿಗೆ, ಆಕಾಂಕ್ಷೆಗಳಿಂದ ನೆರವೇರಿಕೆಗೆ ಬೆಳೆಯುವುದನ್ನು ಕಂಡಿರುವುದರಿಂದ ನಾನು ಟೆಸ್ಟ್ ಕ್ರಿಕೆಟ್‌ಗೆ ನನ್ನ ಅಡಿಪಾಯವನ್ನು ನೀಡುತ್ತೇನೆ.
ಟೆಸ್ಟ್ ಕ್ರಿಕೆಟ್ ಅನ್ನು ಮುಂದಿನ ಪೀಳಿಗೆಗೆ ವಿಕಸನಗೊಳ್ಳುವ ಸ್ಫೂರ್ತಿಯಾಗಿ ಉಳಿಯುವ ರೀತಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ದೊಡ್ಡ ಪಾತ್ರವನ್ನು ವಹಿಸಿವೆ. ಇದೀಗ ಜೇಮ್ಸ್ ಆಂಡರ್ಸನ್ ಅವರೊಂದಿಗೆ ಈ ಮನ್ನಣೆಯನ್ನು ಹಂಚಿಕೊಳ್ಳುತ್ತಿರುವುದು, ಜಗತ್ತು ಟೆಸ್ಟ್ ಕ್ರಿಕೆಟ್‌ನ ಸಾರವನ್ನು ಇನ್ನಷ್ಟು ಆಚರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
IND vs ENG: ‘ಸ್ವಲ್ಪ ಸಾಮಾನ್ಯ ಜ್ಞಾನ ಬಳಸಿ’; ಇಂಗ್ಲೆಂಡ್ ತಂಡಕ್ಕೆ ಮಾಜಿ ನಾಯಕನ ಸಲಹೆ
ಭಾರತ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಸರಣಿಯ ಮೊದಲ ಟೆಸ್ಟ್ ಜೂನ್ 20 ರಿಂದ ಲೀಡ್ಸ್‌ನಲ್ಲಿ ನಡೆಯಲಿದೆ. ಆ ಬಳಿಕ ಎರಡನೇ ಟೆಸ್ಟ್ ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ನಾಲ್ಕನೇ ಟೆಸ್ಟ್ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಜುಲೈ 31 ರಿಂದ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Thu, 19 June 25