ಏಷ್ಯಾಕಪ್​ನಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ: ಪಲ್ಲಕೆಲೆಯಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ

Asia Cup 2023, India vs Pakistan Match Preview: ಏಷ್ಯಾಕಪ್ 2023 ಟೂರ್ನಿಯಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಈ ಹೈವೋಲ್ಟೇಜ್ ಕದನ ಶುರುವಾಗಲಿದೆ. ಟೀಮ್ ಇಂಡಿಯಾ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದ್ದರೆ, ಪಾಕ್ ಎರಡನೇ ಜಯದ ವಿಶ್ವಾಸದಲ್ಲಿದೆ.

ಏಷ್ಯಾಕಪ್​ನಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ: ಪಲ್ಲಕೆಲೆಯಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ
IND vs PAK Asia Cup 2023

Updated on: Sep 02, 2023 | 7:29 AM

ಏಷ್ಯಾಕಪ್ 2023 ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗರಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಈ ರಣರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ನೇಪಾಳ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾದಲ್ಲಿರುವ ಪಾಕ್, ಇಂದಿನ ಪಂದ್ಯ ಕೂಡ ಗೆದ್ದರೆ ಸೂಪರ್-4 ಹಂತಕ್ಕೆ ತೇರ್ಗಡೆ ಆಗಲಿದೆ. ಇತ್ತ ಟೀಮ್ ಇಂಡಿಯಾ ಚೊಚ್ಚಲ ಪಂದ್ಯದಲ್ಲಿ ಗೆಲುವು ಎದುರು ನೋಡುತ್ತಿದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈ ಪಂದ್ಯದ ಮೇಲಿದೆ.

ಭಾರತಕ್ಕೆ ಆಡುವ ಬಳಗದ್ದೇ ಚಿಂತೆ:

ಟೀಮ್ ಇಂಡಿಯಾಕ್ಕೆ ಪ್ಲೇಯಿಂಗ್ ಇಲೆವೆನ್​ನದ್ದೇ ಚಿಂತೆ. ಕೆಎಲ್ ರಾಹುಲ್ ಅಲಭ್ಯರಾಗಿರುವ ಕಾರಣ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ರಾಹುಲ್ ಆಡದ ಕಾರಣ ವಿಕೆಟ್ ಕೀಪಿಂಗ್ ಜವಾಬ್ದಾರಿ ಇಶಾನ್ ಕಿಶನ್ ಹೊರಲಿದ್ದಾರೆ. ಹೀಗಾದಾಗ ರೋಹಿತ್, ಗಿಲ್, ಕಿಶನ್ ಹೀಗೆ ಓಪನಿಂಗ್ ಸ್ಲಾಟ್​ಗೆ ಮೂರು ಆಯ್ಕೆಗಳು ಎದುರಾಗುತ್ತದೆ. ಆರಂಭಿಕನಾಗಿ ಯಶಸ್ಸು ಸಾಧಿಸಿರುವ ಕಿಶನ್​ಗೆ ಯಾವ ಸ್ಥಾನ ನೀಡುವುದು ಎಂಬುದು ರೋಹಿತ್-ದ್ರಾವಿಡ್ ತಲೆನೋವಾಗಿದೆ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮೂರೂ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

Breaking: ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಪಾಕ್ ತಂಡ ಪ್ರಕಟ! ಬಾಬರ್ ಪಡೆಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?

ಇದನ್ನೂ ಓದಿ
ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗವನ್ನು ಕಾಡಲಿದೆ ಅದೊಂದು ನ್ಯೂನತೆ..
ಏಷ್ಯಾಕಪ್​ನಲ್ಲಿ ಈ ಐದು ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ
ಭಾರತ- ಪಾಕ್ ಪಂದ್ಯ ಯಾವ ಚಾನೆಲ್​ನಲ್ಲಿ ಎಷ್ಟು ಗಂಟೆಗೆ ಆರಂಭ?
ಪಾಕ್ ವಿರುದ್ಧ ಯಾವ ತಂಡದೊಂದಿಗೆ ಕಣಕ್ಕಿಳಿಯಲ್ಲಿದ್ದಾರೆ ರೋಹಿತ್?

ಜಡೇಜಾ-ಹಾರ್ದಿಕ್ ಆಲ್ರೌಂಡರ್​ಗಳಾದರೆ, ಕುಲ್ದೀಪ್ ಯಾದವ್ ಸ್ಪಿನ್ನರ್ ಆಗಿದ್ದಾರೆ. ಜಸ್​ಪ್ರಿತ್ ಬುಮ್ರಾ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಥಾಕೂರ್, ಪ್ರಸಿದ್ಧ್ ಕೃಷ್ಣ ಹೀಗೆ ನಾಲ್ಕು ಆಯ್ಕೆಗಳಿವೆ. ಒಟ್ಟಾರೆ ಟೀಮ್ ಇಂಡಿಯಾ ಸ್ಟಾರ್ ಆಟಗಾರರಿಂದ ಕೂಡಿದ್ದರೂ ತಂಡದ ಪ್ಲೇಯಿಂಗ್ ಇಲೆವೆನ್ ಕಟ್ಟುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಪಾಕ್ ವಿರುದ್ಧದ ಪಂದ್ಯದಲ್ಲಿ ಯಾರೆಲ್ಲ ಆಡುತ್ತಾರೆ ಎಂಬುದು ನೋಡಬೇಕಿದೆ.

ಪಾಕ್ ಪ್ಲೇಯಿಂಗ್ ಇಲೆವೆನ್ ಪ್ರಕಟ:

ಭಾರತ ವಿರುದ್ಧದ ಕದನಕ್ಕೆ ಪಾಕಿಸ್ತಾನದ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ನೇಪಾಳ ವಿರುದ್ಧ ಕಣಕ್ಕಿಳಿದಿದ್ದ ಆಟಗಾರರೇ ಭಾರತ ವಿರುದ್ಧ ಕೂಡ ಆಡುತ್ತಾರೆ. ಫಖರ್ ಜಮಾನ್ ಹಾಗೂ ಇಮಾಮ್-ಉಲ್-ಹಕ್ ಕಳಪೆ ಫಾರ್ಮ್​ನಲ್ಲಿದ್ದರೂ ಮತ್ತೊಂದು ಅವಕಾಶ ನೀಡಲಾಗಿದೆ. ಹೀಗಾಗಿ ಇವರಿಬ್ಬರ ಮೇಲೆ ಒತ್ತಡವಿದೆ. ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿರುವ ನಾಯಕ ಬಾಬರ್ ಅಜಮ್ ಭಾರತಕ್ಕೆ ಸವಾಲಾಗಿದ್ದಾರೆ. ಮೊಹಮ್ಮದ್ ರಿಜ್ವಾನ್ ಕೂಡ ಉತ್ತಮ ಲಯದಲ್ಲಿದ್ದಾರೆ. ಇಫ್ತಿಕರ್ ಅಹ್ಮದ್ ನೇಪಾಳ ವಿರುದ್ಧ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದರು. ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಪ್ರಮುಖ ಬೌಲರ್​ಗಳಾಗಿದ್ದಾರೆ.

ಪಲ್ಲಕೆಲೆ ಪಿಚ್ ರಿಪೋರ್ಟ್:

ಇದು ನಿಧಾನಗತಿಯ ಪಿಚ್ ಆಗಿರುವುದರಿಂದ ಬ್ಯಾಟ್ಸ್​ಮನ್​ಗಳು ರನ್ ಕದಿಯಲು ಪರದಾಡುವುದನ್ನು ಕಾಣಬಹುದು. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡುವುದು ಉತ್ತಮ. ಈ ಮೈದಾನದಲ್ಲಿ ರನ್ ಚೇಸ್​ನ ದಾಖಲೆಯು ಅತ್ಯುತ್ತಮವಾಗಿದೆ. ಅಂಕಿಅಂಶಗಳ ಪ್ರಕಾರ, ಮೊದಲು ಬ್ಯಾಟಿಂಗ್ ಮಾಡಿದ ತಂಡವು 34 ಪಂದ್ಯಗಳಲ್ಲಿ 14 ರಲ್ಲಿ ಮಾತ್ರ ಗೆದ್ದಿದ್ದರೆ, 19 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಇಲ್ಲಿ ವೇಗಿಗಳಿಗಿಂತ ಸ್ಪಿನ್ನರ್​ಗಳೇ ಹೆಚ್ಚು ಮಿಂಚಿದ್ದಾರೆ.

ಹವಾಮಾನ ವರದಿ:

ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. AccuWeather.com ಪ್ರಕಾರ, ಪಲ್ಲೆಕೆಲೆಯಲ್ಲಿ 94 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ ಮತ್ತು 27 ಪ್ರತಿಶತದಷ್ಟು ಗುಡುಗು ಸಹಿತ ಮಳೆಯಾಗಲಿದೆಯಂತೆ. ಪಂದ್ಯದ ವೇಳೆ ಶೇ.97 ರಷ್ಟು ಮೋಡ ಕವಿದ ವಾತಾವರಣ ಇರಲಿದೆ ಎಂದು ವರದಿ ಆಗಿದೆ. ಪಂದ್ಯ ಆರಂಭಕ್ಕೆ ಮಳೆ ಅಡ್ಡಿಪಡಿಸಿ ಕೆಲ ಸಮಯದ ಬಳಿಕ ನಿಂತು ಇನ್ನೂ ಸಮಯವಿದ್ದರೆ ಎರಡೂ ತಂಡಗಳು ಕನಿಷ್ಠ 20 ಓವರ್‌ಗಳ ಪಂದ್ಯವನ್ನು ಆಡಬೇಕು ಎಂಬ ನಿಯಮವಿದೆ. ಎಲ್ಲಾದರು ಪಂದ್ಯ ರದ್ದಾದರೆ ಯಾವುದೇ ಮೀಸಲು ದಿನವನ್ನು ನಿಗದಿ ಮಾಡಿಲ್ಲ. ಬದಲಾಗಿ ಉಭಯ ತಂಡಕ್ಕೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

ಪಂದ್ಯ ಎಷ್ಟು ಗಂಟೆಗೆ ಆರಂಭ?, ನೇರಪ್ರಸಾರ:

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಪಂದ್ಯಕ್ಕೆ ಅರ್ಧಗಂಟೆ ಮೊದಲು ಟಾಸ್ ನಡೆಯಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು (ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ ಎಚ್‌ಡಿ). ಇದಲ್ಲದೆ, ಇದನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನ ಮೊಬೈಲ್‌ನಲ್ಲಿಯೂ ಉಚಿತವಾಗಿ ವೀಕ್ಷಿಸಬಹುದು.

37 ವರ್ಷಗಳ ಬಳಿಕ ಭಾರತ ಚೆಸ್ ಲೋಕಕ್ಕೆ ಹೊಸ ಸಾಮ್ರಾಟ; ಚೆಸ್ ದಂತಕಥೆಯನ್ನು ಹಿಂದಿಕ್ಕಿದ 17 ವರ್ಷದ ಪೋರ!

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಝಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ