ಸೋಲಿನ ನಡುವೆ ಟೀಮ್ ಇಂಡಿಯಾದ ‘ಸಿಕ್ಸರ್’ಗಳ ವಿಶ್ವ ದಾಖಲೆ!

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಅಂಗಳದಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ಸಿಕ್ಸರ್‌ಗಳ ಸುನಾಮಿ ಎಬ್ಬಿಸಿ ಐತಿಹಾಸಿಕ  ದಾಖಲೆಯೊಂದನ್ನು ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರನ್‌ಗಳ ಬೆನ್ನಟ್ಟುವ ಹಾದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ, ಟಿ20ಐ ಇತಿಹಾಸದಲ್ಲೇ 2,000 ಸಿಕ್ಸರ್‌ಗಳ ಗಡಿ ದಾಟಿದ ಏಷ್ಯಾದ ಮೊದಲ ತಂಡ ಎನಿಸಿಕೊಂಡಿದೆ.

ಸೋಲಿನ ನಡುವೆ ಟೀಮ್ ಇಂಡಿಯಾದ ಸಿಕ್ಸರ್ಗಳ ವಿಶ್ವ ದಾಖಲೆ!
Team India
Image Credit source: BCCI

Updated on: Oct 15, 2026 | 8:31 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅದು ಸಹ ಸಿಕ್ಸರ್​ಗಳ ಸುರಿಮಳೆಯೊಂದಿಗೆ. ಅಂದರೆ ಟಿ20 ಇಂಟರ್​ನ್ಯಾಷನಲ್ ಕ್ರಿಕೆಟ್ ಇತಿಹಾಸದಲ್ಲೇ 2000 ಸಿಕ್ಸರ್ ಸಿಡಿಸಿದ ಏಷ್ಯಾದ ಮೊದಲ ಹಾಗೂ ವಿಶ್ವ 2ನೇ ತಂಡವೆಂಬ ಹೆಗ್ಗಳಿಕೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.

ಹೈದರಾಬಾದ್​ನ ರಾಜೀವ್​ ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಒಟ್ಟು 13 ಸಿಕ್ಸರ್ ಸಿಡಿಸಿದ್ದರು. ಈ ಹದಿಮೂರು ಸಿಕ್ಸ್​ಗಳೊಂದಿಗೆ ಭಾರತ ತಂಡ ಟಿ20 ಕ್ರಿಕೆಟ್​ನಲ್ಲಿ 2 ಸಾವಿರ ಸಿಕ್ಸರ್​ಗಳ ಗಡಿದಾಟಿದೆ.

2,000ನೇ ಸಿಕ್ಸರ್ ಸಿಡಿಸಿದ ಸಂಜು ಸ್ಯಾಮ್ಸನ್!

ವೆಸ್ಟ್ ಇಂಡೀಸ್ ದೈತ್ಯರು ಮೊದಲ ಬ್ಯಾಟಿಂಗ್ ನಡೆಸಿ 247 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರು. ಈ ಸವಾಲಿನ ರನ್ ಗುರಿ ಬೆನ್ನಟ್ಟಿದ ಭಾರತದ ಪರ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ವೆಸ್ಟ್ ಇಂಡೀಸ್‌ನ ರೋಸ್ಟನ್ ಚೇಸ್ ಎಸೆತಕ್ಕೆ ಸಂಜು ಸ್ಯಾಮ್ಸನ್ ಲಾಂಗ್-ಆಫ್ ಮೇಲೆ ಭರ್ಜರಿ ಸಿಕ್ಸರ್ ಎತ್ತುವ ಮೂಲಕ ಭಾರತದ ಹೆಸರಿಗೆ 2,000ನೇ ಟಿ20 ಸಿಕ್ಸರ್ ಬರೆದರು. ಈ ಅಮೋಘ ಸಿಕ್ಸರ್‌ನೊಂದಿಗೆ ಸಂಜು ಸ್ಯಾಮ್ಸನ್ ತಾವೂ ಕೂಡ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳ ವೈಯಕ್ತಿಕ ಮೈಲಿಗಲ್ಲನ್ನು ಪೂರ್ಣಗೊಳಿಸಿದ 6ನೇ ಭಾರತೀಯ ಎನಿಸಿಕೊಂಡರು.

ವಿಶ್ವದ 2ನೇ ತಂಡ:

ವಿಶ್ವ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ ಎರಡನೇ ತಂಡ ಎಂಬ ಕೀರ್ತಿ ಭಾರತದ್ದಾಗಿದೆ. ಇದಕ್ಕೂ ಕೇವಲ ಒಂದು ಪಂದ್ಯದ ಮುಂಚೆಯಷ್ಟೇ ವೆಸ್ಟ್ ಇಂಡೀಸ್ ತಂಡ 2,000 ಸಿಕ್ಸರ್‌ಗಳ ಗಡಿ ತಲುಪಿದ ವಿಶ್ವದ ಮೊದಲ ತಂಡವಾಗಿ ಹೊರಹೊಮ್ಮಿತ್ತು. ಪ್ರಸ್ತುತ ವೆಸ್ಟ್ ಇಂಡೀಸ್ 259 ಪಂದ್ಯಗಳಿಂದ 2,026 ಸಿಕ್ಸರ್ ಹೊಂದಿದ್ದರೆ, ಭಾರತ ತಂಡ ಕೇವಲ 297 ಪಂದ್ಯಗಳಲ್ಲಿ ಈ ಸಾಧನೆಗೈದಿದೆ.

ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ತಂಡಗಳು:

ಕ್ರಮಾಂಕ ತಂಡ ಒಟ್ಟು ಸಿಕ್ಸರ್‌ಗಳು
1 ವೆಸ್ಟ್ ಇಂದೀಸ್ 2,026
2 ಭಾರತ 2,010
3 ನ್ಯೂಝಿಲೆಂಡ್ 1,585
4 ಪಾಕಿಸ್ತಾನ್ 1,500
5 ಸೌತ್ ಆಫ್ರಿಕಾ 1,407
6 ಇಂಗ್ಲೆಂಡ್ 1,406
7 ಆಸ್ಟ್ರೇಲಿಯಾ 1,400
8 ಶ್ರೀಲಂಕಾ 1,045
9 ಅಫ್ಘಾನಿಸ್ತಾನ್ 1,014
10 ಬಾಂಗ್ಲಾದೇಶ್ 986

ಇದನ್ನೂ ಓದಿ: ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಆ ’18 ರನ್‌ಗಳು’

ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಭಾರತ ಸೋತಿದ್ದರೂ, ಟೀಮ್ ಇಂಡಿಯಾದ ಯುವ ಪಡೆ ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಅಮೋಘ ಮೈಲಿಗಲ್ಲಿನೊಂದಿಗೆ ಭಾರತೀಯ ಬ್ಯಾಟರ್‌ಗಳು ವೆಸ್ಟ್ ಇಂಡೀಸ್ ದಾಂಡಿಗರ ಹೆಸರಿನಲ್ಲಿರುವ ಸಿಕ್ಸರ್‌ಗಳ ವಿಶ್ವ ದಾಖಲೆಯನ್ನು ಮುರಿಯಲು ಬಲವಾದ ಪೈಪೋಟಿ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರ ದಂಡು ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯುವುದನ್ನು ನಾವು ಎದುರು ನೋಡಬಹುದು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us