ಮೂರಕ್ಕೇರಿದವರು… ಟೀಮ್ ಇಂಡಿಯಾದಲ್ಲಿ ಏನಾಗ್ತಿದೆ ..!
Team India: ಟೀಮ್ ಇಂಡಿಯಾ ಪರ ಈ ಹಿಂದೆ ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ತಂಡದಿಂದ ಪೂಜಾರ ಹೊರಬಿದ್ದ ಬಳಿಕ ಭಾರತದ ಪರ ಒನ್ಡೌನ್ನಲ್ಲಿ ಐವರು ಬ್ಯಾಟರ್ಗಳು ಕಣಕ್ಕಿಳಿದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ ಅವರನ್ನು ಚೊಚ್ಚಲ ಪಂದ್ಯದ ಬೆನ್ನಲ್ಲೇ ತಂಡದಿಂದ ಕೈ ಬಿಡಲಾಗಿದೆ.

ಇಂಗ್ಲೆಂಡ್-ಭಾರತ ನಡುವಣ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಕೆಎಲ್ ರಾಹುಲ್ ಕೇವಲ 2 ರನ್ಗಳಿಸಿ ಔಟಾದರು.
ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿದರು. ವಿಶೇಷ ಎಂದರೆ ಕಳೆದ ಪಂದ್ಯದಲ್ಲಿ ಕರುಣ್ ಆಡಿದ್ದು 6ನೇ ಕ್ರಮಾಂಕದಲ್ಲಿ. ಈ ಬಾರಿ ಅವರಿಗೆ ಮುಂಬಡ್ತಿ ನೀಡಲಾಗಿದೆ.
ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸಾಯಿ ಸುದರ್ಶನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿದ್ದು, ಹೀಗಾಗಿ ಕರುಣ್ ನಾಯರ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಟೀಮ್ ಇಂಡಿಯಾ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಐವರು ಬ್ಯಾಟರ್ಗಳನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿರುವುದು. ಅಂದರೆ ಸ್ಥಿರವಾಗಿ ಯಾವುದೇ ಬ್ಯಾಟ್ಸ್ಮನ್ಗೆ 3ನೇ ಕ್ರಮಾಂಕದಲ್ಲಿ ಅವಕಾಶ ನೀಡಿಲ್ಲ ಎಂಬುದು.
- ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಆಡಿದ್ದು ಕನ್ನಡಿಗ ದೇವದತ್ ಪಡಿಕ್ಕಲ್.
- ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಇನ್ನು ಮೂರನೇ ಪಂದ್ಯದಲ್ಲೂ ಗಿಲ್ ಮುಂದುವರೆದಿದ್ದರು.
- ಆದರೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು.
- ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರನ್ನು ಮತ್ತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯಿತು. ಇದೀಗ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಸ್ಥಾನದಲ್ಲಿ, ಅಂದರೆ 4ನೇ ಕ್ರಮಾಂಕದಲ್ಲಿ ಗಿಲ್ ಕಣಕ್ಕಿಳಿಯುತ್ತಿದ್ದಾರೆ.
- ಇತ್ತ ಶುಭ್ಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿರುವುದರಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದರೆ ಚೊಚ್ಚಲ ಪಂದ್ಯದ ಬೆನ್ನಲ್ಲೇ ಸಾಯಿ ಸುದರ್ಶನ್ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಗಿದೆ.
- ಇದೀಗ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಟೀಮ್ ಇಂಡಿಯಾ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಐವರು ಬ್ಯಾಟರ್ಗಳನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದಾರೆ.
ಇತ್ತ ದ್ವಿತೀಯ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಮೊದಲ ಇನಿಂಗ್ಸ್ನಲ್ಲಿ 31 ರನ್ ಬಾರಿಸಿ ಔಟಾಗಿದ್ದಾರೆ. ಇನ್ನು ದ್ವಿತೀಯ ಇನಿಂಗ್ಸ್ನಲ್ಲೂ ಅವರು ವಿಫಲರಾದರೆ, ಮತ್ತೆ ಮೂರನೇ ಕ್ರಮಾಂಕದ ಬ್ಯಾಟರ್ ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
ಒಟ್ಟಿನಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಈ ಪ್ರಯೋಗವು ಇದೀಗ ಚರ್ಚೆಗೀಡಾಗಿದ್ದು, ಟೀಮ್ ಇಂಡಿಯಾದಲ್ಲಿ ಏನಾಗ್ತಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
