IND vs NZ: ವೇಗದ ರನ್ ಚೇಸ್; ವಿಶ್ವ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ
India vs New Zealand T20: ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ರಾಯ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ, 208 ರನ್‌ಗಳ ಬೃಹತ್ ಮೊತ್ತವನ್ನು ಕೇವಲ 92 ಎಸೆತಗಳಲ್ಲಿ ಬೆನ್ನಟ್ಟಿ ಭಾರತ ವಿಶ್ವದಾಖಲೆ ನಿರ್ಮಿಸಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಷ್ಟು ಕಡಿಮೆ ಎಸೆತಗಳಲ್ಲಿ 200+ ಗುರಿ ಬೆನ್ನಟ್ಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರಣಿಯಲ್ಲಿ ಭಾರತ ಪ್ರಾಬಲ್ಯ ಮುಂದುವರೆಸಿದೆ.

ಭಾರತ ಮತ್ತು ನ್ಯೂಜಿಲೆಂಡ್ (India vs New Zealand T20) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಸಹ ಆತಿಥೇಯ ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದುಕೊಳ್ಳುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 208 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 16ನೇ ಓವರ್ನಲ್ಲೇ ಅಂದರೆ ಕೇವಲ 92 ಎಸೆತಗಳಲ್ಲಿ 209 ರನ್ ಕಲೆಹಾಕಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಇಷ್ಟು ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಾಖಲೆಯನ್ನು ನಿರ್ಮಿಸಿದೆ.
ಕಿವೀಸ್ಗೆ ಉತ್ತಮ ಆರಂಭ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನು ಪಡೆಯಿತು. ಡೆವೊನ್ ಕಾನ್ವೇ ಮತ್ತು ಟಿಮ್ ಸೀಫರ್ಟ್ ಪವರ್‌ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ನಂತರ ರಚಿನ್ ರವೀಂದ್ರ 26 ಎಸೆತಗಳಲ್ಲಿ 44 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ 27 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 19 ರನ್ ಮತ್ತು ಡ್ಯಾರಿಲ್ ಮಿಚೆಲ್ 18 ರನ್‌ಗಳ ಕಾಣಿಕೆ ನೀಡಿದರು. ಪರಿಣಾಮವಾಗಿ, ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಮತ್ತೊಂದೆಡೆ, ಭಾರತದ ಪರ ಬೌಲಿಂಗ್ನಲ್ಲಿ ಮಿಂಚಿದ ಕುಲ್ದೀಪ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರೆ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು. ಆದಾಗ್ಯೂ, ಅರ್ಷದೀಪ್ ಸಿಂಗ್ ತಮ್ಮ ನಾಲ್ಕು ಓವರ್‌ಗಳಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟು ವಿಕೆಟ್ ಪಡೆಯದೆ ದುಬಾರಿ ಎನಿಸಿಕೊಂಡರು.
ಭಾರತಕ್ಕೆ ಆರಂಭಿಕ ಆಘಾತ
ಈ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಿಬ್ಬರು ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕ್ರೀಸ್ಗೆ ಬಂದ ಇಶಾನ್ ಕಿಶನ್ 32 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಿತ 76 ರನ್ ಬಾರಿಸಿದರು. ಇಶಾನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನ್ಯೂಜಿಲೆಂಡ್ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಂತ ವೇಗದ ಟಿ20 ಅರ್ಧಶತಕ ಎಂಬ ದಾಖಲೆಯನ್ನು ನಿರ್ಮಿಸಿದರು. ಕಿಶನ್ ಜೊತೆಗೆ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಅಜೇಯ ಅರ್ಧಶತಕ ಬಾರಿಸಿದರು.
IND vs NZ:ಬುಮ್ರಾ, ಅಕ್ಷರ್ ಔಟ್..! ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ 2 ಬದಲಾವಣೆ
ಕಿಶನ್- ಸೂರ್ಯ ಸ್ಫೋಟಕ ಅರ್ಧಶತಕ
ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್, 37 ಎಸೆತಗಳಲ್ಲಿ 82 ರನ್ ಗಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಕೊಂಡೊಯ್ದ ನಂತರವೇ ಪೆವಿಲಿಯನ್‌ಗೆ ಮರಳಿದರು. ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಶಿವಂ ದುಬೆ ಕೂಡ ಕೊನೆಯಲ್ಲಿ ಬಂದು 18 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ಕೇವಲ 15.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ಬೆನ್ನಟ್ಟಿತು. ಇದರೊಂದಿಗೆ ಟೀಂ ಇಂಡಿಯಾ 16 ಓವರ್ ಒಳಗೆ 200+ ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೊದಲ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Fri, 23 January 26
