2027 ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?

India's 2027 ODI World Cup Squad: ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾ 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. ಐಪಿಎಲ್‌ಗೂ ಮುನ್ನವೇ ಆಯ್ಕೆ ಸಮಿತಿ 20 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬುಮ್ರಾ ಸೇರಿದಂತೆ ಪ್ರಮುಖ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇದು ತಂಡದ ಮುಂದಿನ ವಿಶ್ವಕಪ್ ಗೆಲುವಿನ ಗಂಭೀರ ಗುರಿಯನ್ನು ಎತ್ತಿ ತೋರಿಸುತ್ತದೆ.

2027 ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಸ್ಥಾನ?
Team India

Updated on: Mar 21, 2026 | 7:32 PM

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾದ (Team India) ಮುಂದಿನ ಗುರಿ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (2027 World Cup) ಗೆಲ್ಲುವುದಾಗಿದಾಗಿದೆ. ಇದಕ್ಕೆ ಪೂರಕವಾಗಿ ಟಿ20 ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಹೆಡ್ ಕೋಚ್ ಗೌತಮ್ ಗಂಭೀರ್, ಐಪಿಎಲ್ ಮುಗಿದ ಬಳಿಕ ಏಕದಿನ ವಿಶ್ವಕಪ್‌ಗೆ ಸಿದ್ಧತೆಗಳು ಪ್ರಾರಂಭವಾಗಲಿವೆ ಎಂದಿದ್ದರು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ, ಐಪಿಎಲ್​ಗೂ ಮುನ್ನವೇ ತನ್ನ ತಯಾರಿಯನ್ನು ಶುರು ಮಾಡಿದೆ. ಅದರಂತೆ ಆಯ್ಕೆ ಸಮಿತಿಯು 2027ರ ಏಕದಿನ ವಿಶ್ವಕಪ್​ಗಾಗಿ 20 ಆಟಗಾರರ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಹಾಗಿದ್ದರೆ ಆ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು? ಎಂಬುದನ್ನು ನೋಡುವುದಾದರೆ..

ಮಾರ್ಚ್ 28 ರಂದು ಪ್ರಾರಂಭವಾಗುವ ಐಪಿಎಲ್‌ನಿಂದಾಗಿ ಭಾರತ ತಂಡವು ಎರಡು ತಿಂಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರಲಿದೆ. ಅದರ ನಂತರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವ ಕಾರಣ, ಈ ಮಾದರಿಯ ಸರಣಿಗೆ ಬಿಸಿಸಿಐ ಹೆಚ್ಚು ಒತ್ತು ನೀಡಲಿದೆ. ಆದರೆ, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಇರಾದೆಯಲ್ಲಿದ್ದ ಆಟಗಾರರಿಗೆ ನಿರಾಸೆ ಎದುರಾಗಿದೆ. ಏಕೆಂದರೆ ಆಯ್ಕೆದಾರರು ಈಗಾಗಲೇ ಏಕದಿನ ವಿಶ್ವಕಪ್‌ಗೆ 20 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ 20 ಆಟಗಾರರಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಈ ಆಟಗಾರರಿಗೆ ತಂಡದಲ್ಲಿ ಸ್ಥಾನ?

ಈಗ ಪ್ರಶ್ನೆಯೆಂದರೆ ಆಯ್ಕೆ ಮಂಡಳಿ ಸಿದ್ಧಪಡಿಸಿರುವ 20 ಆಟಗಾರರ ಪಟ್ಟಿಯಲ್ಲಿ ಯಾರ್ಯಾರಿಬಹುದು ಎಂಬುದು. ಸಧ್ಯಕ್ಕೆ ಆ 20 ಆಟಗಾರರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದ ಏಕದಿನ ಸರಣಿ ಮತ್ತು ಈ ಸ್ವರೂಪದಲ್ಲಿರುವ ಸಾಮಾನ್ಯ ಆಟಗಾರರನ್ನು ಪರಿಗಣಿಸಿದರೆ, ಊಹಿಸುವುದು ಕಷ್ಟವೇನಲ್ಲ. ನಾಯಕನಾಗಿರುವ ಶುಭ್​ಮನ್ ಗಿಲ್ ಹಾಗೂ ಉಪನಾಯಕನಾಗಿರುವ ಶ್ರೇಯಸ್ ಅಯ್ಯರ್ ತಂಡದಲ್ಲಿರುವುದು ಖಚಿತ. ಹಾಗೆಯೇ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಂಡದಲ್ಲಿ ಇರುತ್ತಾರೆ.

ಇವರಲ್ಲದೆ, ನಿಯಮಿತ ಏಕದಿನ ವಿಕೆಟ್ ಕೀಪರ್ ಕೆಎಲ್ ರಾಹುಲ್, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಖಚಿತವಾಗಿದೆ. ಇವರ ಜೊತೆಗೆ, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರರ್ಥ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ ವೃತ್ತಿಜೀವನ ಮುಗಿದಿದೆ ಎನ್ನಬಹುದು.

ಸ್ಪಿನ್ ವಿಭಾಗದಲ್ಲಿ ಯಾರು?

ಸ್ಪಿನ್ ವಿಭಾಗದಲ್ಲಿ, ಕುಲ್ದೀಪ್ ಜೊತೆಗೆ ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಂಡದಲ್ಲಿ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ರವೀಂದ್ರ ಜಡೇಜಾ ಅವರ ಸೇರ್ಪಡೆಯ ಬಗ್ಗೆ ಪ್ರಶ್ನೆ ಉಳಿದಿದೆ. ಆದಾಗ್ಯೂ, ಅವರ ಅನುಭವವನ್ನು ಗಮನಿಸಿದರೆ, ಅವರು 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಖಚಿತ. ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಬ್ಯಾಕಪ್ ಆರಂಭಿಕ ಆಟಗಾರರೆಂದು ಪರಿಗಣಿಸಬಹುದು. ಆದಾಗ್ಯೂ, ಬ್ಯಾಕಪ್ ವಿಕೆಟ್ ಕೀಪರ್​ಗಾಗಿ ಪೈಪೋಟಿ ತೀವ್ರವಾಗಿದ್ದು, ರಿಷಭ್ ಪಂತ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಪಂತ್ ಮತ್ತು ಇಶಾನ್ 20 ಜನರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

2027 ರ ಏಕದಿನ ವಿಶ್ವಕಪ್​ಗೆ ಈಗಲೇ 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ

ಆ 20 ಆಟಗಾರರು ಇವರೇ..

ಶುಭ್​ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ರವೀಂದ್ರ ಜಡೇಜಾ, ಸಂಜು ಸ್ಯಾಮ್ಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us