
2025 ರ ಏಷ್ಯಾಕಪ್ (Asia Cup 2025) ಪಂದ್ಯಾವಳಿ ಇದೇ ಸೆಪ್ಟೆಂಬರ್ 9 ರಂದು ಪ್ರಾರಂಭವಾಗಲಿದೆ. ಈ ಟೂರ್ನಿಯ ಹೈವೋಲ್ಟೇಜ್ ಕದನ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ. ಆದರೆ ಅದಕ್ಕೂ ಮುನ್ನ ಎರಡೂ ಸಾಂಪ್ರದಾಯಿಕ ಎದುರಾಳಿಗಳು ಈ ಟೂರ್ನಿಗಾಗಿ ದುಬೈನ ಐಸಿಸಿ ಅಕಾಡೆಮಿಯ ಮೈದಾನದಲ್ಲಿ ಅಭ್ಯಾಸ ಮಾಡುತ್ತಿವೆ. ಎರಡೂ ತಂಡಗಳು ಒಂದೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಿವೆ. ಏತನ್ಮಧ್ಯೆ, ಒಂದೇ ಮೈದಾನದಲ್ಲಿ ಅಭ್ಯಾಸ ಮಾಡಿದರೂ, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಒಬ್ಬರಿಗೊಬ್ಬರು ಕನಿಷ್ಠ ಪಕ್ಷ ಕೈ ಕೂಡ ಕುಲುಕಲಿಲ್ಲ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನಿ ಆಟಗಾರರು ಒಂದೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರೂ ಪರಸ್ಪರ ಭೇಟಿಯಾಗಿಲ್ಲ. ಪಾಕಿಸ್ತಾನ ತಂಡ ದುಬೈನಲ್ಲಿರುವ ಐಸಿಸಿ ಅಕಾಡೆಮಿ ತಲುಪಿದಾಗ, ಟೀಂ ಇಂಡಿಯಾ ಅಲ್ಲಿ ಅಭ್ಯಾಸ ನಡೆಸುತ್ತಿತ್ತು. ಭಾರತೀಯ ಆಟಗಾರರು ನೆಟ್ಸ್‌ನಲ್ಲಿ ಬೆವರು ಸುರಿಸುವುದನ್ನು ನೋಡಿದ ಪಾಕಿಸ್ತಾನದ ಆಟಗಾರರು ಯಾರೊಂದಿಗೂ ಮಾತನಾಡದೆ ತಮ್ಮ ತರಬೇತಿ ಮತ್ತು ಡ್ರಿಲ್ಲಿಂಗ್‌ನಲ್ಲಿ ನಿರತರಾದರು ಎಂದು ವರದಿಯಾಗಿದೆ.
ವಾಸ್ತವವಾಗಿ ಏಷ್ಯಾಕಪ್ಗೂ ಮುನ್ನ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ಹಾಗೂ ಯುಎಇ ಜೊತೆಗೆ ತ್ರಿಕೋನ ಸರಣಿಯಲ್ಲಿ ನಿರತವಾಗಿದೆ. ಇದೀಗ ಪಾಕಿಸ್ತಾನ ತಂಡ ಫೈನಲ್ಗೇರಿದ್ದು, ಅಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಇದೇ ಕಾರಣಕ್ಕಾಗಿಯೇ ಪಾಕಿಸ್ತಾನ ತಂಡ ಸೆಪ್ಟೆಂಬರ್ 6 ರಂದು ಸಂಜೆ 7 ಗಂಟೆಯ ನಂತರ ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲು ಆಗಮನಿಸಿತ್ತು.
ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಆರಂಭವಾಗುತ್ತದೆ. ಆದರೆ ಭಾರತ ತನ್ನ ಅಭಿಯಾನವನ್ನು ಸೆಪ್ಟೆಂಬರ್ 10 ರಂದು ಪ್ರಾರಂಭಿಸಲಿದೆ. ಆದರೆ ಪಾಕಿಸ್ತಾನ ತಂಡವು ಸೆಪ್ಟೆಂಬರ್ 12 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅದರ ನಂತರ, ಸೆಪ್ಟೆಂಬರ್ 14 ರಂದು, ಭಾರತ ಮತ್ತು ಪಾಕಿಸ್ತಾನ ತಂಡಗಳು 2025 ರ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಆ ಪಂದ್ಯವು ದುಬೈನಲ್ಲಿಯೇ ನಡೆಯಲಿದೆ.
ಈ ಬಾರಿಯ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಮಾದರಿಯಲ್ಲಿ ಆಡಿದ ಏಷ್ಯಾಕಪ್ ಪಂದ್ಯಗಳ ದಾಖಲೆಯ ಬಗ್ಗೆ ಮಾತನಾಡಿದರೆ, ಭಾರತ ಪಾಕಿಸ್ತಾನಕ್ಕಿಂತ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಟಿ20 ಏಷ್ಯಾಕಪ್‌ನಲ್ಲಿ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 2 ಬಾರಿ ಮತ್ತು ಪಾಕಿಸ್ತಾನ ಒಂದು ಬಾರಿ ಗೆದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Sun, 7 September 25