Asia Cup 2025: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ
India-Pakistan Asia Cup Clash Confirmed: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಭಾರತ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಅನುಮತಿ ನೀಡಿದ್ದು, ದ್ವಿಪಕ್ಷೀಯ ಸರಣಿಗಳನ್ನು ನಿಷೇಧಿಸಿದ್ದರೂ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಎರಡೂ ತಂಡಗಳು ಭಾಗವಹಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಈ ನಿರ್ಧಾರ ಇತರ ಕ್ರೀಡೆಗಳಿಗೂ ಅನ್ವಯವಾಗುತ್ತದೆ.

2025 ರ ಟಿ20 ಏಷ್ಯಾಕಪ್ (Asia Cup 2025) ಬರುವ ಸೆಪ್ಟೆಂಬರ್ 9 ರಿಂದ ಯುಎಇಲ್ಲಿ ಆರಂಭವಾಗಲಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ನಡೆಯಲಿದೆ. ಆದರೆ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವ ಕಾರಣ ಏಷ್ಯಾಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಹೊರಬಿದ್ದಿರುವ ತಾಜಾ ಮಾಹಿತಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಭಾರತ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಪಾಕಿಸ್ತಾನಿ ಭಯೋತ್ಪಾದಕರು ಪಹಲ್ಗಾಮ್ ಮೇಲೆ ದಾಳಿ ಮಾಡಿ ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದರು. ಇದರ ನಂತರ, ಭಾರತ ಸರ್ಕಾರ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನದ ವಿರುದ್ಧ ಸಮರ ಸಾರಿತ್ತು. ಭಾರತದ ದಾಳಿಗೆ ನಲುಗಿದ್ದ ಪಾಕಿಸ್ತಾನ ಅಂತಿಮವಾಗಿ ಕದನ ವಿರಾಮಕ್ಕೆ ಮುಂದಾಯಿತು. ಇದಾದ ಬಳಿಕವೂ ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಹೀಗಾಗಿ ಉಭಯ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಕ್ರೀಡಾ ಸಚಿವಾಲಯ ಬದ್ಧವೈರಿಗಳ ಕಾಳಗಕ್ಕೆ ಹಸಿರು ನಿಶಾನೆ ತೋರಿಸಿದೆ.
“In so far as bilateral sports events in each other’s country are concerned, Indian teams will not be participating in competitions in Pakistan. Nor will we permit Pakistani teams to play in India”: Ministry of Youth and Affairs, Govt of India pic.twitter.com/s1P0b1AbTT
— ANI (@ANI) August 21, 2025
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಗ್ರೀನ್ ಸಿಗ್ನಲ್
ಪಿಟಿಐ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಈ ಹಿಂದೆಯಂತೆ ಇನ್ನು ಮುಂದೆಯೂ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಆಡುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಆದರೆ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈ ನಿಲುವನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ. ಪಾಕಿಸ್ತಾನದ ವಿಚಾರವಾಗಿ ಕ್ರೀಡಾ ಸಚಿವಾಲಯ ಹೊಸ ನೀತಿಯನ್ನು ಜಾರಿಗೆ ತಂದಿದೆ. ಕ್ರೀಡಾ ಸಚಿವಾಲಯದ ಈ ನೀತಿಯ ಪ್ರಕಾರ, ಭಾರತ ತಂಡವು ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ. ಅಲ್ಲದೆ, ಭಾರತ ತಂಡವು ಯಾವುದೇ ಪಂದ್ಯಾವಳಿ ಅಥವಾ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಪಾಕಿಸ್ತಾನ ತಂಡಕ್ಕೂ ಭಾರತದಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಆದರೆ ಏಷ್ಯಾಕಪ್ ಬಹುರಾಷ್ಟ್ರೀಯ ಪಂದ್ಯಾವಳಿಯಾಗಿರುವುದರಿಂದ ನಾವು ಭಾರತ ಕ್ರಿಕೆಟ್ ತಂಡವನ್ನು ಅದರಲ್ಲಿ ಆಡುವುದನ್ನು ತಡೆಯುವುದಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
ಇತರ ಕ್ರೀಡೆಗಳಿಗೂ ಅನ್ವಯಿಸುತ್ತದೆ
ಕ್ರೀಡಾ ಸಚಿವಾಲಯದ ಈ ನೀತಿಯು ಕ್ರಿಕೆಟ್‌ಗೆ ಮಾತ್ರ ಅನ್ವಯಿಸುವುದಿಲ್ಲ, ಇದು ಇತರ ಕ್ರೀಡೆಗಳನ್ನು ಸಹ ಒಳಗೊಂಡಿರುತ್ತದೆ. ಇದರರ್ಥ ಈಗ ಯಾವುದೇ ಪಾಕಿಸ್ತಾನಿ ಆಟಗಾರ ಯಾವುದೇ ಸ್ಪರ್ಧೆಗಾಗಿ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಯಾವುದೇ ಭಾರತೀಯ ಆಟಗಾರ ಪಾಕಿಸ್ತಾನಿ ನೆಲಕ್ಕೆ ಕಾಲಿಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಎರಡೂ ತಂಡಗಳು ಅಥವಾ ಆಟಗಾರರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪರಸ್ಪರ ವಿರುದ್ಧವಾಗಿ ಆಡುವುದನ್ನು ಕಾಣಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Thu, 21 August 25
