Asia Cup 2022: ಬುಧವಾರ ನಡೆಯಲಿರುವ ಏಷ್ಯಾಕಪ್ನ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Hong Kong) ಹಾಂಗ್ ಕಾಂಗ್ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ರೋಚಕ ಜಯ ಸಾಧಿಸಿರುವ ಭಾರತ ತಂಡವು ಈ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾ 7+4 ಪ್ಲೇಯಿಂಗ್ ಪ್ಲ್ಯಾನ್ನೊಂದಿಗೆ ಕಣಕ್ಕಿಳಿದಿತ್ತು. ಅಂದರೆ ನಾಲ್ವರು ಪರಿಪೂರ್ಣ ಬೌಲರ್ಗಳು ಹಾಗೂ 7 ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದರು.
ಇಲ್ಲಿ 7+4 ಆಯ್ಕೆಯೊಂದಿಗೆ ಕಣಕ್ಕಿಳಿದ ಕಾರಣ ರಿಷಭ್ ಪಂತ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿತ್ತು. ಅವರ ಸ್ಥಾನದಲ್ಲಿ ವೇಗಿ ಅವೇಶ್ ಖಾನ್ಗೆ ಚಾನ್ಸ್ ನೀಡಲಾಗಿತ್ತು. ಇದಾಗ್ಯೂ ಅವೇಶ್ ನಾಲ್ಕು ಓವರ್ಗಳನ್ನು ಎಸೆದಿರಲಿಲ್ಲ. ಅಂದರೆ 2 ಓವರ್ನಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದಿದ್ದ ಅವೇಶ್ ಖಾನ್ಗೆ ಆ ಬಳಿಕ ರೋಹಿತ್ ಶರ್ಮಾ ಬೌಲಿಂಗ್ ನೀಡಿರಲಿಲ್ಲ.
ಇನ್ನು ರವೀಂದ್ರ ಜಡೇಜಾ ಕೂಡ ಕೇವಲ 2 ಓವರ್ ಮಾತ್ರ ಎಸೆದಿದ್ದರು. ಹೀಗಾಗಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ 5 ಬೌಲರ್ಗಳೊಂದಿಗೆ ಮಾತ್ರ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಲ್ಲದೆ ಅವೇಶ್ ಖಾನ್ ಬದಲಿಗೆ ರಿಷಭ್ ಪಂತ್ಗೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ.
ಏಕೆಂದರೆ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಜಯ ಸಾಧಿಸಿದರೂ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅಂದರೆ ದಿನೇಶ್ ಕಾರ್ತಿಕ್ ಅಥವಾ ಹಾರ್ದಿಕ್ ಪಾಂಡ್ಯ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿದ್ದರೆ ಟೀಮ್ ಇಂಡಿಯಾ ಅಂತಿಮ ಹಂತದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೇ ಹೆಚ್ಚಿತ್ತು. ಹೀಗಾಗಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ 8+3 ಪ್ಲ್ಯಾನ್ನೊಂದಿಗೆ ಕಣಕ್ಕಿಳಿಯಬಹುದು. ಈ ಮೂಲಕ ಹೆಚ್ಚುವರಿ ಓರ್ವ ಬ್ಯಾಟ್ಸ್ಮನ್ ಅನ್ನು ಕಣಕ್ಕಿಳಿಸಿ, ಐವರು ಬೌಲರ್ಗಳ ಮೂಲಕ ಪ್ರಯೋಗ ನಡೆಸಬಹುದು.
ಅದರಂತೆ ಟೀಮ್ ಇಂಡಿಯಾ ಪರ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸ್ಪಿನ್ನರ್ಗಳಾಗಿ ರವೀಂದ್ರ ಜಡೇಜಾ ಹಾಗೂ ಯುಜ್ವೇಂದ್ರ ಚಹಲ್ ಆಡಲಿದ್ದಾರೆ. ಈ ಮೂಲಕ ಐವರು ಬೌಲರ್ಗಳನ್ನು ಬಳಸಿ 20 ಓವರ್ಗಳನ್ನು ಪೂರ್ಣಗೊಳಿಸಬಹುದು. ಹಾಗೆಯೇ 8ನೇ ಕ್ರಮಾಂಕದವರೆಗೆ ಬ್ಯಾಟ್ಸ್ಮನ್ಗಳನ್ನು ಕಣಕ್ಕಿಳಿಸಬಹುದು.
ಏಕೆಂದರೆ ಸೂಪರ್-4 ಹಂತದಲ್ಲೂ ಭಾರತ-ಪಾಕ್ ಮತ್ತೆ ಮುಖಾಮುಖಿಯಾಗಲಿದ್ದು, ಅದಕ್ಕೂ ಮುನ್ನ ಟೀಮ್ ಇಂಡಿಯಾದ ಬೌಲಿಂಗ್ ಲೈನಪ್ ಹಾಗೂ ಬ್ಯಾಟಿಂಗ್ ಲೈನಪ್ನಲ್ಲಿ ಸಮತೋಲನ ರೂಪಿಸಬೇಕಿದೆ. ಈ ಎಲ್ಲಾ ಪ್ರಯೋಗಕ್ಕೆ ಇರುವ ಏಕೈಕ ಆಯ್ಕೆಯೆಂದರೆ ಹಾಂಗ್ ಕಾಂಗ್ ವಿರುದ್ಧದ ಪಂದ್ಯ. ಹೀಗಾಗಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ 8+3 ಪ್ಲ್ಯಾನ್ನ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.