Asia Cup 2022: ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಯುವ ವೇಗಿ ಎಂಟ್ರಿ
India Squad Asia Cup: ಏಷ್ಯಾಕಪ್ ಆಗಸ್ಟ್ 27 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆಗಸ್ಟ್ 28 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಸೆಣಸಲಿದೆ.
ಏಷ್ಯಾಕಪ್ಗೆ ದಿನಗಣನೆ ಶುರುವಾದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮತ್ತೋರ್ವ ವೇಗಿ ಎಂಟ್ರಿ ಕೊಟ್ಟಿದ್ದಾರೆ. ಭಾರತ ತಂಡದ ಅಭ್ಯಾಸಕ್ಕಾಗಿ ಯುವ ವೇಗಿ ಕುಲ್ದೀಪ್ ಸೇನ್ ಅವರನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿದೆ. ಕುಲ್ದೀಪ್ ಸೇನ್ ಈ ಹಿಂದೆ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಇದೀಗ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ತಂಡದಲ್ಲಿ ಮೂವರು ವೇಗಿಗಳು ಮಾತ್ರ ಇದ್ದು, ಹೀಗಾಗಿ ಹೆಚ್ಚುವರಿ ನೆಟ್ ಬೌಲರ್ ಆಗಿ ಕುಲ್ದೀಪ್ ಸೇನ್ ಹಾಗೂ ದೀಪಕ್ ಚಹರ್ ಅವರನ್ನು ಬಳಸಿಕೊಳ್ಳಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಏಕೆಂದರೆ ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯಗೊಂಡು ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಕೊರೋನಾ ಸೋಂಕಿಗೆ ಒಳಗಾಗಿರುವ ಕಾರಣ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಏಷ್ಯಾಕಪ್ಗಾಗಿ ತೆರಳಿಲ್ಲ. ಅಲ್ಲದೆ ತಾತ್ಕಾಲಿಕ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರಿಗೆ ತಂಡದ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ಇದೀಗ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಟೀಮ್ ಇಂಡಿಯಾ ಅಭ್ಯಾಸವನ್ನು ಆರಂಭಿಸಿದೆ. ಆದರೆ ಯುಎಇ ಹವಾಮಾನದಿಂದಾಗಿ ಹೆಚ್ಚಿನ ಹೊತ್ತು ನೆಟ್ಸ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟಕರ. ಹೀಗಾಗಿ ಹೆಚ್ಚುವರಿ ನೆಟ್ ಬೌಲರ್ ಆಗಿ ಕುಲ್ದೀಪ್ ಸೇನ್ಗೆ ಬುಲಾವ್ ನೀಡಲಾಗಿದೆ.
ಟೀಮ್ ಇಂಡಿಯಾದಲ್ಲಿ ಮೂವರು ಮೀಸಲು ಆಟಗಾರರು:
ಈ ಬಾರಿಯ ಏಷ್ಯಾಕಪ್ನಿಂದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಹೊರಗುಳಿದ ಕಾರಣ ಆಯ್ಕೆ ಸಮಿತಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಿದೆ. ಅಂದರೆ ಟೂರ್ನಿಯುದ್ದಕ್ಕೂ ಈ ಮೂವರು ವೇಗಿಗಳಲ್ಲೇ ಬದಲಾವಣೆ ಮಾಡಿಕೊಳ್ಳಬೇಕಿದೆ. ಒಂದು ವೇಳೆ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಅಥವಾ ಟೂರ್ನಿ ಆರಂಭಕ್ಕೂ ಮುನ್ನ ತಂಡವು ಬದಲಾವಣೆ ಬಯಸಿದರೆ, ಮೀಸಲು ಆಟಗಾರರ ಪಟ್ಟಿಯಲ್ಲಿರುವ ಆಟಗಾರರಿಗೆ ಅವಕಾಶ ಸಿಗಲಿದೆ. ಅದರಂತೆ ತಂಡದಲ್ಲಿ ಮೀಸಲು ಆಟಗಾರರಾಗಿ ಅಕ್ಷರ್ ಪಟೇಲ್, ದೀಪಕ್ ಚಹರ್ ಹಾಗೂ ಶ್ರೇಯಸ್ ಅಯ್ಯರ್ ಇದ್ದಾರೆ.
ಏಷ್ಯಾಕಪ್ ಆಗಸ್ಟ್ 27 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆಗಸ್ಟ್ 28 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಸೆಣಸಲಿದೆ. ಈ ಪಂದ್ಯದೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ಗಾಗಿ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್
Published On - 4:32 pm, Thu, 25 August 22