Virat Kohli: ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೇಟ್​ಪಾಸ್..?

Virat Kohli: ಐಪಿಎಲ್​ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಆಡಿದ್ದು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವನ್ನು ಮಾತ್ರ. ಇದೀಗ ಇಂಗ್ಲೆಂಡ್ ವಿರುದ್ದ 2 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಷ್ಟೇ ಆಡಬೇಕಿದೆ.

Virat Kohli: ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿಗೆ ಗೇಟ್​ಪಾಸ್..?
virat kohli
TV9kannada Web Team

| Edited By: Zahir PY

Jul 06, 2022 | 1:14 PM

ಟೀಮ್ ಇಂಡಿಯಾದಿಂದ (Team India) ವಿರಾಟ್ ಕೊಹ್ಲಿಯನ್ನು (Virat kohli) ಕೈಬಿಡಲಿದ್ದಾರಾ ಎಂಬ ಪ್ರಶ್ನೆಗಳ ನಡುವೆ ಇದೀಗ ಆಯ್ಕೆ ಸಮಿತಿಯ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಕೆಂದರೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಬಗ್ಗೆ ಚರ್ಚಿಸಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಂದರೆ ಸೌತ್ ಆಫ್ರಿಕಾ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ಕೊಹ್ಲಿಗೆ ಇದೀಗ ಮತ್ತೆ ವಿಶ್ರಾಂತಿ ನೀಡುತ್ತಿರುವುದೇಕೆ ಎಂಬ ಪ್ರಶ್ನೆಗಳು ಹುಟ್ಟುಕೊಂಡಿದೆ. ಅತ್ತ ಕಿಂಗ್ ಕೊಹ್ಲಿ ಸದ್ಯ ಇಂಗ್ಲೆಂಡ್ ವಿರುದ್ದದ ಸೀಮಿತ ಓವರ್​ಗಳ ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಈ ಸರಣಿಯ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿ ಆಡಲಿದೆ. ಆದರೆ ಈ ಸರಣಿಗೆ ತೆರಳುವ ತಂಡದಿಂದ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯು ಕೊಹ್ಲಿಯ ಜೊತೆ ಮಾತುಕತೆ ನಡೆಸಲಿದ್ದು, ಈ ವೇಳೆ ವಿಶ್ರಾಂತಿ ಬಗ್ಗೆ ಚರ್ಚಿಸಲಾಗುತ್ತದೆ ಎಂದು ವರದಿಯಾಗಿದೆ.

ಐಪಿಎಲ್​ ಬಳಿಕ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಆಡಿದ್ದು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವನ್ನು ಮಾತ್ರ. ಇದೀಗ ಇಂಗ್ಲೆಂಡ್ ವಿರುದ್ದ 2 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಷ್ಟೇ ಆಡಬೇಕಿದೆ. ಇದಾಗ್ಯೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲು ಆಯ್ಕೆದಾರರು ಏಕೆ ಮುಂದಾಗುತ್ತಿದ್ದಾರೆ ಎಂಬುದೇ ಈಗ ಪ್ರಶ್ನಾರ್ಥಕ.

ಇತ್ತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವ ಮುನ್ಸೂಚನೆ ಎಂದು ಕೂಡ ಆಯ್ಕೆ ಸಮಿತಿಯ ಈ ನಡೆಯನ್ನು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ದದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 31 ರನ್​ ಮಾತ್ರ ಕಲೆಹಾಕಿದ್ದರು. ಇನ್ನು ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ ಭಾರತದ ಪರ 10 ಟಿ20 ಪಂದ್ಯಗಳನ್ನು ಆಡಿದ್ದರು. ಈ ವೇಳೆ 279 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಕೇವಲ 368 ರನ್​ ಮಾತ್ರ.

ಇದೀಗ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದಿದ್ದರೆ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಬೀಳಲಿದ್ದಾರೆ ಎನ್ನಲಾಗುತ್ತಿದೆ. ಇದರ ಮುನ್ಸೂಚನೆಯಾಗಿ ವೆಸ್ಟ್ ಇಂಡೀಸ್ ಸರಣಿ ವೇಳೆ ವಿಶ್ರಾಂತಿ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಟಿ20 ವಿಶ್ವಕಪ್​ಗೆ ತಿಂಗಳುಗಳು ಮಾತ್ರ ಉಳಿದಿರುವಾಗ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುತ್ತಿರುವುದೇ ಈ ಎಲ್ಲಾ ಅನುಮಾನಗಳಿಗೆ ಕಾರಣವಾಗಿದೆ.

ಅಂದರೆ ಅಕ್ಟೋಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಶುರುವಾಗಲಿದ್ದು, ಅದಕ್ಕೂ ಮುನ್ನ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಆಯ್ಕೆ ಸಮಿತಿಯು ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ವಿಶ್ರಾಂತಿ ನೀಡಲು ಮುಂದಾಗುತ್ತಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿಗೆ ಮತ್ತೆ ವಿಶ್ರಾಂತಿ ನೀಡುವ ಬಗ್ಗೆ ಆಯ್ಕೆದಾರರು ಚರ್ಚಿಸಲು ಮುಂದಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಸದ್ಯ ಇಂಗ್ಲೆಂಡ್​ನಲ್ಲಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಅವರು ತಂಡವನ್ನು ಪ್ರಕಟಿಸುವ ಮುನ್ನ ವಿರಾಟ್ ಕೊಹ್ಲಿ ಜೊತೆ ಚರ್ಚಿಸಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಆದರೆ ಈ ಚರ್ಚೆಯ ಬಳಿಕ ಆಯ್ಕೆ ಸಮಿತಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಈ ವಾರದೊಳಗೆ ಸ್ಪಷ್ಟವಾಗಲಿದೆ.

ವೆಸ್ಟ್ ಇಂಡೀಸ್ ವಿರುದ್ದದ ಸರಣಿಯ ವೇಳಾಪಟ್ಟಿ ಹೀಗಿದೆ:

ಏಕದಿನ ಸರಣಿ ವೇಳಾಪಟ್ಟಿ:

ಜುಲೈ 22- ಮೊದಲ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್) ಜುಲೈ 24- 2ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್) ಜುಲೈ 27- 3ನೇ ಏಕದಿನ ಪಂದ್ಯ (ಕ್ವೀನ್ಸ್ ಪಾರ್ಕ್​ ಓವಲ್)

ಟಿ20 ಸರಣಿ ವೇಳಾಪಟ್ಟಿ:

ಜುಲೈ 29 – ಮೊದಲ ಟಿ20 ಪಂದ್ಯ (ಲಾರಾ ಕ್ರಿಕೆಟ್ ಸ್ಟೇಡಿಯಂ) ಆಗಸ್ಟ್ 1​- 2ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್ ಸ್ಟೇಡಿಯಂ) ಆಗಸ್ಟ್​ 2- 3ನೇ ಟಿ20 ಪಂದ್ಯ (ವಾರ್ನರ್ ಪಾರ್ಕ್) ಆಗಸ್ಟ್​ 6- 4ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ) ಆಗಸ್ಟ್ 7- 5ನೇ ಟಿ20 ಪಂದ್ಯ (ಕೌಂಟಿ ಕ್ರಿಕೆಟ್ ಸ್ಟೇಡಿಯಂ)

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada