IND vs IRE 2nd T20I Highlights: ಟೀಮ್ ಇಂಡಿಯಾ ವಿರುದ್ದ ಸೋತರೂ ಗೆದ್ದ ಐರ್ಲೆಂಡ್

| Updated By: ಝಾಹಿರ್ ಯೂಸುಫ್

Updated on: Jun 29, 2022 | 11:36 AM

IND vs IRE 2nd T20I Highlights: ಡಬ್ಲಿನ್​ನ ದಿ ವಿಲೇಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.

IND vs IRE 2nd T20I Highlights: ಟೀಮ್ ಇಂಡಿಯಾ ವಿರುದ್ದ ಸೋತರೂ ಗೆದ್ದ ಐರ್ಲೆಂಡ್
IND vs IRE
Follow us on

IND vs IRE 2nd T20I Highlights: ಐರ್ಲೆಂಡ್ ವಿರುದ್ದದ 2 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್​ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡವು, 2ನೇ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸಿತು. ಈ ಎರಡೂ ಪಂದ್ಯಗಳಲ್ಲೂ ಐರ್ಲೆಂಡ್ ತಂಡವು ಟೀಮ್ ಇಂಡಿಯಾಗೆ (Team India) ಕಠಿಣ ಪೈಪೋಟಿ ನೀಡಿತ್ತು ಎಂಬುದೇ ವಿಶೇಷ. ಏಕೆಂದರೆ ಡಬ್ಲಿನ್​ನಲ್ಲಿ ನಡೆದ ಮಳೆಬಾಧಿತ ಮೊದಲ ಪಂದ್ಯದಲ್ಲಿ 12 ಓವರ್​ಗಳಲ್ಲಿ ಐರ್ಲೆಂಡ್​ ತಂಡವು ಬರೋಬ್ಬರಿ 108 ರನ್​ಗಳಿಸಿ ಅಬ್ಬರಿಸಿದ್ದರು. ಈ ಮೂಲಕ ಅನುಭವಿ ಬೌಲರ್​ಗಳ ಮುಂದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದಾಗ್ಯೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾ ಈ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದುಕೊಂಡಿತು. ಆದರೆ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರುಗಳನ್ನು ಬೆಂಡೆತ್ತುವ ಮೂಲಕ ಐರ್ಲೆಂಡ್ ತಂಡವು ಸೋಲಿನ ಭಯ ಹುಟ್ಟಿಸಿತ್ತು.

ಡಬ್ಲಿನ್​ನ ದಿ ವಿಲೇಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿತ್ತು. ಯುವ ಓಪನರ್​ ಇಶಾನ್ ಕಿಶನ್ (3) ಬೇಗನೆ ಔಟಾದರೂ, ಆರಂಭಿಕನಾಗಿ ಕಾಣಿಸಿಕೊಂಡ ಸಂಜು ಸ್ಯಾಮ್ಸನ್​ ಸ್ಪೋಟಕ ಆರಂಭ ಒದಗಿಸಿದ್ದರು. ಅಲ್ಲದೆ ಈ ಬಾರಿ ಮೂರನೇ ಕ್ರಮಾಂಕದಲ್ಲಿ ಆಡಿದ ದೀಪಕ್ ಹೂಡಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಪರಿಣಾಮ 2ನೇ ವಿಕೆಟ್​ಗೆ 176 ರನ್​ಗಳ ಜೊತೆಯಾಟ ಮೂಡಿಬಂತು. ಒಂದೆಡೆ ಸಂಜು ಸ್ಯಾಮ್ಸನ್​ 42 ಎಸೆತಗಳಲ್ಲಿ 4 ಸಿಕ್ಸ್​ ಹಾಗೂ 9 ಫೋರ್​ಗಳೊಂದಿಗೆ 77 ರನ್​ ಬಾರಿಸಿದರೆ, ದೀಪಕ್ ಹೂಡಾ ಭರ್ಜರಿ ಶತಕ ಸಿಡಿಸಿದ್ದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಹೂಡಾ 57 ಎಸೆತಗಳಲ್ಲಿ 6 ಸಿಕ್ಸ್​ ಹಾಗೂ 9 ಫೋರ್​ನೊಂದಿಗೆ 104 ರನ್ ಬಾರಿಸಿ ಅಬ್ಬರಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗಳ ನಷ್ಟಕ್ಕೆ 225 ರನ್​ ಕಲೆಹಾಕಿತು.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

225 ರನ್​ಗಳ ಬೃಹತ್ ಮೊತ್ತವನ್ನು ಕಲೆಹಾಕಿದಾಗ ಎಲ್ಲರೂ ಟೀಮ್ ಇಂಡಿಯಾಗೆ ಸುಲಭ ಗೆಲುವು ದಕ್ಕಲಿದೆ ಎಂದೇ ಭಾವಿಸಿದ್ದರು. ಆದರೆ ಐರ್ಲೆಂಡ್ ಬ್ಯಾಟ್ಸ್​ಮನ್​ಗಳ ಹೋರಾಟ ನಿಜಕ್ಕೂ ಮೆಚ್ಚತಕ್ಕದ್ದು. ಏಕೆಂದರೆ ಆರಂಭಿಕ ಆಟಗಾರ ಪಾಲ್ ಸ್ಟೀರ್ಲಿಂಗ್ ಕೇವಲ 18 ಎಸೆತಗಳಲ್ಲಿ 40 ರನ್​​ ಬಾರಿಸುವ ಮೂಲಕ ತಂಡಕ್ಕೆ ಸ್ಪೋಟಕ ಆರಂಭ ನೀಡಿದ್ದರು. ಇನ್ನೊಂದು ತುದಿಯಲ್ಲಿ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 37 ಎಸೆತಗಳಲ್ಲಿ 60 ರನ್​ ಬಾರಿಸಿ ಮಿಂಚಿದ್ದರು.

ಇನ್ನು ಹ್ಯಾರಿ ಟೆಕ್ಟರ್ 28 ಎಸೆತಗಳಲ್ಲಿ 39 ರನ್ ಬಾರಿಸಿದರೆ, ಜಾರ್ಜ್​ ಡಾಕ್ರೆಲ್ 16 ಎಸೆತಗಳಲ್ಲಿ 34 ರನ್ ಸಿಡಿಸಿದ್ದರು. ಅಂತಿಮ ಹಂತದಲ್ಲಿ ಮಾರ್ಕ್ ಅಡೇರ್ 12 ಎಸೆತಗಳಲ್ಲಿ 23 ರನ್​ ಬಾರಿಸಿದರೂ ವಿರೋಚಿತವಾಗಿ 4 ರನ್​ಗಳಿಂದ ಸೋಲೊಪ್ಪಬೇಕಾಯಿತು. ಅಂದರೆ ಟೀಮ್ ಇಂಡಿಯಾ ವಿರುದ್ದ 5 ವಿಕೆಟ್ ನಷ್ಟಕ್ಕೆ 221 ರನ್​ ಬಾರಿಸಿರುವುದು ಐರ್ಲೆಂಡ್ ಪಾಲಿಗೆ ದೊಡ್ಡ ಸಾಧನೆಯೇ ಸರಿ. ಏಕೆಂದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಟೀಮ್ ಇಂಡಿಯಾದ ಬೌಲರ್​ಗಳನ್ನು ಐರ್ಲೆಂಡ್​ ಬ್ಯಾಟ್ಸ್​ಮನ್​ಗಳು ಅಕ್ಷರಶಃ ಚೆಂಡಾಡಿದ್ದರು.

ಅದರಲ್ಲೂ ಐಪಿಎಲ್​ನಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳ ಮುಂದೆ ಬೌಲಿಂಗ್ ಮಾಡಿದ್ದ ಪಡೆಯನ್ನೇ ಹೊಂದಿದ್ದ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ಕೇವಲ 4 ರನ್​ಗಳ ಅಂತರದಿಂದ ಎಂಬುದು ಇಲ್ಲಿ ಉಲ್ಲೇಖಾರ್ಹ. ಇಂತಹ ಅನುಭವಿ ಬೌಲರ್​ಗಳನ್ನು ಎದುರಿಸಿದ ಐರ್ಲೆಂಡ್​ನ ಅನಾನುಭವಿ ತಂಡವು ಟೀಮ್ ಇಂಡಿಯಾ ಆಟಗಾರರಿಗೆ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಟೀಮ್ ಇಂಡಿಯಾ ಸ್ಟಾರ್​ ಬೌಲರ್​ಗಳ ಮುಂದೆ ಪರಾಕ್ರಮ ಮೆರೆಯುವ ಮೂಲಕ ಐರ್ಲೆಂಡ್ ತಂಡವು ತನ್ನ ಬ್ಯಾಟಿಂಗ್ ಬಲಿಷ್ಠತೆಯನ್ನು ವಿಶ್ವದ ಮುಂದೆ ತೆರೆದಿಟ್ಟಿದೆ. ಹೀಗಾಗಿಯೇ ಈ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ದ ಐರ್ಲೆಂಡ್ ತಂಡ ಸೋತರೂ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.