IND vs ENG: ಸರಣಿ ಗೆಲ್ಲಲು ಬಂದಿದ್ದ ಆಂಗ್ಲರಿಗೆ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ

India Sweeps England 3-0: ಅಹಮದಾಬಾದ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 142 ರನ್‌ಗಳಿಂದ ಸೋಲಿಸಿ 3-0 ರಿಂದ ಸರಣಿಯನ್ನು ಗೆದ್ದುಕೊಂಡಿದೆ. ಶುಭ್‌ಮನ್ ಗಿಲ್ (112), ವಿರಾಟ್ ಕೊಹ್ಲಿ (52) ಮತ್ತು ಶ್ರೇಯಸ್ ಅಯ್ಯರ್ (78) ಅವರ ಅದ್ಭುತ ಬ್ಯಾಟಿಂಗ್‌ನಿಂದ ಭಾರತ 356 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 214 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

IND vs ENG: ಸರಣಿ ಗೆಲ್ಲಲು ಬಂದಿದ್ದ ಆಂಗ್ಲರಿಗೆ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ
Team India

Updated on: Feb 12, 2025 | 8:52 PM

ನಿರೀಕ್ಷೆಯಂತೆ ಅಹಮದಾಬಾದ್​ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಆಂಗ್ಲರನ್ನು ಏಕಪಕ್ಷೀಯವಾಗಿ ಸೋಲಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 356 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಇದಕ್ಕುತ್ತರವಾಗಿ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 214 ರನ್‌ಗಳಿಗೆ ಆಲೌಟ್ ಆಗಿ 142 ರನ್‌ಗಳಿಂದ ಹೀನಾಯ ಸೋಲನುಭವಿಸಿತು. ಇತ್ತ ನಾಗ್ಪುರ ಮತ್ತು ಕಟಕ್ ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ್ದ ಭಾರತ ಇದರೊಂದಿಗೆ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜೊತೆಗೆ 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆಯನ್ನು ಮಾಡಿದೆ.

ಗಿಲ್, ಕೊಹ್ಲಿ, ಅಯ್ಯರ್ ಮ್ಯಾಜಿಕ್

ಟೀಂ ಇಂಡಿಯಾದ ಈ ಬೃಹತ್ ಗೆಲುವಿನಲ್ಲಿ ಉಪನಾಯಕ ಶುಭ್​ಮನ್ ಗಿಲ್ ಅವರ ಪಾತ್ರ ಪ್ರಮುಖವಾಗಿತ್ತು. ಮೋದಿ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಗಿಲ್, ತಮ್ಮ ಏಕದಿನ ವೃತ್ತಿಜೀವನದ 7 ನೇ ಶತಕವನ್ನು ದಾಖಲಿಸಿದರು. ಗಿಲ್ ತಮ್ಮ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದೊಂದಿಗೆ 112 ರನ್ ಗಳಿಸಿದರು. ಗಿಲ್ ಹೊರತುಪಡಿಸಿ, ಶ್ರೇಯಸ್ ಅಯ್ಯರ್ 78 ರನ್‌ಗಳ ಇನ್ನಿಂಗ್ಸ್ ಆಡಿದರೆ, ವಿರಾಟ್ ಕೊಹ್ಲಿ ಕೂಡ 52 ರನ್​ಗಳ ಕಾಣಿಕೆ ನೀಡಿದರು. ರಾಹುಲ್ ಕೂಡ 40 ರನ್ ಬಾರಿಸಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಭಾರತೀಯ ಬೌಲರ್​ಗಳ ಸಾಂಘಿಕ ದಾಳಿ

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಸ್ಫೋಟಕ ಆರಂಭ ಪಡೆಯಿತ್ತಾದರೂ, ಆ ಬಳಿಕ ಭಾರತದ ಬೌಲರ್‌ಗಳು ಅವರ ವೇಗಕ್ಕೆ ಕಡಿವಾಣ ಹಾಕಿದರು . ವೇಗಿಗಳಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ವೈಫಲ್ಯ

ಇಂಗ್ಲೆಂಡ್ ತಂಡದ ಸೋಲಿಗೆ ಪ್ರಮುಖ ಕಾರಣ ತಂಡದ ಬ್ಯಾಟ್ಸ್‌ಮನ್‌ಗಳು. ಫಿಲ್ ಸಾಲ್ಟ್, ಬೆನ್ ಡಕೆಟ್, ಟಾಮ್ ಬ್ಯಾಂಟನ್, ಜೋ ರೂಟ್, ಹ್ಯಾರಿ ಬ್ರೂಕ್ ಎಲ್ಲರೂ ಉತ್ತಮ ಆರಂಭ ಪಡೆದರಾದರೂ, ಯಾರೂ ಅದನ್ನು ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ, ಬ್ಯಾಂಟನ್ ಅತಿ ಹೆಚ್ಚು 38 ರನ್‌ಗಳ ಕಾಣಿಕೆ ನೀಡಿದರೆ, ಡಕೆಟ್ 34, ಸಾಲ್ಟ್ 23 ಮತ್ತು ರೂಟ್ 24 ರನ್ ಬಾರಿಸಲಷ್ಟೇ ಶಕ್ತರಾದರು. ಹ್ಯಾರಿ ಬ್ರೂಕ್ 19 ರನ್, ನಾಯಕ ಬಟ್ಲರ್ ಕೇವಲ 6 ರನ್, ಲಿವಿಂಗ್‌ಸ್ಟೋನ್ 23 ಎಸೆತಗಳಲ್ಲಿ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್ ತಂಡವು ತನ್ನ ಬ್ಯಾಟಿಂಗ್ ವೈಫಲ್ಯದಿಂದಾಗಿ ಏಕದಿನ ಸರಣಿಗೂ ಮುನ್ನ ನಡೆದಿದ್ದ ಟಿ20 ಸರಣಿಯನ್ನು ಕಳೆದುಕೊಂಡಿತ್ತು.

ಟೀಂ ಇಂಡಿಯಾ ಗೆಲುವಿನ ಹೈಲೈಟ್ಸ್

ಕಳೆದ 11 ವರ್ಷಗಳಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಅತಿದೊಡ್ಡ ಏಕದಿನ ಗೆಲುವು ಸಾಧಿಸಿದೆ. ಇದು ಇಂಗ್ಲೆಂಡ್ ವಿರುದ್ಧ ರನ್‌ಗಳ ವಿಷಯದಲ್ಲಿ ಎರಡನೇ ಅತಿದೊಡ್ಡ ಗೆಲುವಾಗಿದೆ. 2008 ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 158 ರನ್‌ಗಳಿಂದ ಸೋಲಿಸಿದ್ದ ಟೀಂ ಇಂಡಿಯಾ, ಈಗ ಅಹಮದಾಬಾದ್‌ನಲ್ಲಿ 142 ರನ್‌ಗಳಿಂದ ಮಣಿಸಿದೆ. ಇಷ್ಟೇ ಅಲ್ಲ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ನಾಲ್ಕನೇ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಈ ಮೂಲಕ ರೋಹಿತ್ ಈ ಸಾಧನೆಯನ್ನು ಮೂರು ಬಾರಿ ಮಾಡಿದ್ದ ಧೋನಿ ಮತ್ತು ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Wed, 12 February 25