ಟಿ20 ವಿಶ್ವಕಪ್ನಿಂದ (T20 World cup) ಟೀಂ ಇಂಡಿಯಾದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ (Jasprit Bumrah) ಹೊರಗುಳಿದಿರುವುದು ನಿಮಗೆಲ್ಲ ಗೊತ್ತೇ ಇದೆ. ಬುಮ್ರಾ ಇಂಜುರಿಗೊಂಡಾಗಿನಿಂದ ಅವರ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗುವವರು ಯಾರು ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಏಕೆಂದರೆ ಬುಮ್ರಾ ತಂಡದ ಬೌಲಿಂಗ್ ಬೆನ್ನೇಲುಬಾಗಿದ್ದು, ಅವರ ಸ್ಥಾನಕ್ಕೆ ಬರುವವರು ಕೂಡ ಅದೇ ಜವಬ್ದಾರಿಯನ್ನು ಹೊರಬೇಕಾಗುತ್ತದೆ. ಹೀಗಾಗಿ ಆಯ್ಕೆ ಮಂಡಳಿಯ ಮುಂದೆ ಪ್ರಮುಖವಾಗಿ ಇಬ್ಬರು ಆಟಗಾರರ ಹೆಸರಿದ್ದು, ಅವರಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ( Mohammad Shami) ಒಬ್ಬರಾಗಿದ್ದರೆ, ಮತ್ತೊಬ್ಬರ್ ಆಲ್ರೌಂಡರ್ ದೀಪಕ್ ಚಹರ್ (Deepak Chahar) ಆಗಿದ್ದಾರೆ. ಆದರೆ ಈ ಇಬ್ಬರೂ ಕೂಡ ಸದ್ಯ ಎನ್ಸಿಎನಲ್ಲಿದ್ದು ತಂಡದ ಜೊತೆಗೆ ಆಸ್ಟ್ರೇಲಿಯಾಕ್ಕೆ ಹೋಗಿಲ್ಲ. ಅಲ್ಲದೆ ಎಲ್ಲಾ ದೇಶಗಳು ತಮ್ಮ ತಂಡಗಳನ್ನು ಫೈನಲ್ ಮಾಡಲು ಐಸಿಸಿ ನೀಡಿದ್ದ ಗಡುವು ಈಗಾಗಲೇ ಮುಗಿದಿದ್ದು, ಟೀಂ ಇಂಡಿಯಾ ಮಾತ್ರ ಇದುವರೆಗೆ ಬುಮ್ರಾ ಬದಲಿ ಆಟಗಾರರನ್ನು ಹೆಸರಿಸಿಲ್ಲ.
ಗಾಯಗೊಂಡು ಟಿ20 ವಿಶ್ವಕಪ್ನಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾ ಮತ್ತೊಬ್ಬ ಬೌಲರ್ ಅನ್ನು ಆಯ್ಕೆ ಮಾಡಬೇಕಿದ್ದು, ಮೊದಲೇ ಹೇಳಿದಂತೆ ಸ್ಟ್ಯಾಂಡ್‌ಬೈ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹರ್ ನಡುವೆ ಈ ಸ್ಥಾನಕ್ಕಾಗಿ ಫೈಪೋಟಿ ಹೆಚ್ಚಿದೆ. ಅನುಭವದ ವಿಚಾರಕ್ಕೆ ಬಂದರೆ ಮೊಹಮ್ಮದ್ ಶಮಿ ಚಹರ್ಗಿಂತ ಮುಂದಿದ್ದು, ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಬಿಸಿಸಿಐ ಬೌಲಿಂಗ್ ಆಲ್ರೌಂಡರ್ನತ್ತ ಗಮನಹರಿಸಿದರೆ ದೀಪಕ್ ಚಹರ್ ಸೂಕ್ತ ಆಯ್ಕೆಯಾಗಲಿದ್ದಾರೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು
ಮೊಹಮ್ಮದ್ ಶಮಿ ಮತ್ತು ದೀಪಕ್ ಚಹಾರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ. ಇಬ್ಬರೂ ಪ್ರಸ್ತುತ NCA ಯಲ್ಲಿದ್ದು ಕೋವಿಡ್ -19 ನಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಫಿಟ್‌ನೆಸ್ ಪರೀಕ್ಷೆಯನ್ನು ನೀಡಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ದೀಪಕ್ ಚಹರ್ ಕೂಡ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ಪಾಸ್ ಮಾಡಬೇಕಾಗುತ್ತದೆ.
ಆದರೆ ಈಗಾಗಲೇ ಐಸಿಸಿ ನೀಡಿದ್ದ ಗಡುವು ಮುಗಿದಿದ್ದು, ಇದೀಗ ವಿಶ್ವಕಪ್ ತಂಡದಲ್ಲಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಆಗಲಿ ಅಥವಾ ಬೇರೆ ಯಾವುದೇ ತಂಡವಾಗಲಿ ಅದು ಐಸಿಸಿಯ ಒಪ್ಪಿಗೆ ಪಡೆಯಬೇಕಿದೆ.
ಫಿಟ್ನೆಸ್ ಪರೀಕ್ಷೆಯನ್ನು ನೀಡುವ ಸ್ಥಿತಿಯಲ್ಲಿಲ್ಲ
ದೀಪಕ್ ಚಹರ್ ಪ್ರಸ್ತುತ ಎನ್‌ಸಿಎಯಲ್ಲಿದ್ದು, ಅವರು ಫಿಟ್ನೆಸ್ ಪರೀಕ್ಷೆ ನೀಡುವ ಸ್ಥಿತಿಯಲ್ಲಿಲ್ಲ. ಸದ್ಯ ಅವರನ್ನು ವೈದ್ಯಕೀಯ ತಂಡ ಗಮನಿಸುತ್ತಿದೆ. ಜೊತೆಗೆ ದೀಪಕ್ಗೆ ಗೆಲುವು ದಿನಗಳವರೆಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಶಮಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಅವರು ಕೂಡ ವಿಶ್ವಕಪ್ ತಂಡದಲ್ಲಿ ಆಡಲು ಕಾತುರರಾಗಿದ್ದಾರೆ. ನಿಗದಿತ ಸಮಯಕ್ಕೆ ಬದಲಿ ಆಟಗಾರರನ್ನು ಪ್ರಕಟಿಸದಿದ್ದರೂ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಇನ್ಸೈಡ್ ಸ್ಪೋರ್ಟ್‌ಗೆ ಮಾಹಿತಿ ನೀಡಿದ್ದು, ಜಸ್ಪ್ರೀತ್ ಅವರ ಬದಲಿ ಆಟಗಾರರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಬದಲಾವಣೆಗೆ ಮುನ್ನ ಐಸಿಸಿ ನಿಯಮಗಳು ಹೇಳುವುದೇನು?
ಐಸಿಸಿ ಮಾರ್ಗಸೂಚಿಗಳ ಪ್ರಕಾರ, ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಅಕ್ಟೋಬರ್ 9 ರವರೆಗೆ ಗಡುವು ನೀಡಿತ್ತು. ಈಗ ಐಸಿಸಿ ನೀಡಿದ್ದ ಗಡುವು ಮುಗಿದಿದ್ದು, ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಐಸಿಸಿಯ ಅನುಮತಿ ಪಡೆಯಬೇಕು.
Published On - 6:41 pm, Mon, 10 October 22