Team India: ಸ್ಟಾರ್ ಆಟಗಾರನನ್ನು ಮತ್ತೆ ಆಯ್ಕೆ ಮಾಡಲು ಮುಂದಾದ ಬಿಸಿಸಿಐ
India T20 WC Squad: ಜಸ್ಪ್ರೀತ್ ಬುಮ್ರಾ ಅವರ ಅಲಭ್ಯತೆಯ ನಡುವೆಯೂ ಹೊಸ ಪ್ರಯೋಗಕ್ಕೆ ಮುಂದಾಗಿದ್ದ ಬಿಸಿಸಿಐಗೆ ಏಷ್ಯಾಕಪ್ನಲ್ಲಿನ ಫಲಿತಾಂಶ ಹೊಸ ಪಾಠ ಕಲಿಸಿದೆ.
ಏಷ್ಯಾಕಪ್ನಲ್ಲಿನ ಟೀಮ್ ಇಂಡಿಯಾದ (Team India) ಕಳಪೆ ಬೌಲಿಂಗ್ ಪ್ರದರ್ಶನದ ಬೆನ್ನಲ್ಲೇ ಇದೀಗ ಬಿಸಿಸಿಐ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಅದರಲ್ಲೂ 2021ರ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಟಿ20 ತಂಡದಿಂದ ಅವಕಾಶ ವಂಚಿತರಾಗಿದ್ದ ಮೊಹಮ್ಮದ್ ಶಮಿಗೆ ಮತ್ತೆ ತಂಡದಲ್ಲಿ ಸ್ಥಾನ ಕಲ್ಪಿಸಲು ಆಯ್ಕೆ ಸಮಿತಿ ಚರ್ಚಿಸಿದೆ ಎಂದು ವರದಿಯಾಗಿದೆ. ಅದರಂತೆ ಮುಂಬರುವ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಶಮಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2021 ರ ಟಿ20 ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿಯನ್ನು ಟಿ20 ಕ್ರಿಕೆಟ್ಗೆ ಪರಿಗಣಿಸಿರಲಿಲ್ಲ. ಅಲ್ಲದೆ ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಮಾತ್ರ ಆಯ್ಕೆ ಮಾಡಲಾಗಿತ್ತು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಶಮಿ 20 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದಾಗ್ಯೂ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗಳಲ್ಲಿ ಶಮಿಗೆ ಚಾನ್ಸ್ ನೀಡಿರಲಿಲ್ಲ. ಅಲ್ಲದೆ ಏಷ್ಯಾಕಪ್ಗೆ ಅವೇಶ್ ಖಾನ್, ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಹೀನಾಯ ಪ್ರದರ್ಶನ ನೀಡಿರುವ ಬೆನ್ನಲ್ಲೇ ಶಮಿ ಅವರಿಗೆ ಮತ್ತೆ ಟಿ20 ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಮುಂದಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಇದೇ ತಿಂಗಳು ಶುರುವಾಗಲಿದ್ದು, ಸೆಪ್ಟೆಂಬರ್ 20, 23 ಮತ್ತು 25 ರಂದು ಕ್ರಮವಾಗಿ ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಮೂರು ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯಲ್ಲಿ ಶಮಿ ಅವರಿಗೆ ಮತ್ತೆ ಅವಕಾಶ ನೀಡಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಾಗ್ಯೂ ಟಿ20 ವಿಶ್ವಕಪ್ನಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಏಕೆಂದರೆ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಈ ಇಬ್ಬರು ವೇಗಿಗಳು ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹರ್ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಶಮಿಯ ಪ್ರದರ್ಶನ ಮೇಲೆ ಅವರ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
ಒಟ್ಟಿನಲ್ಲಿ ಅನುಭವಿ ವೇಗಿಗಳ ಅಲಭ್ಯತೆಯ ನಡುವೆಯೂ ಹೊಸ ಪ್ರಯೋಗಕ್ಕೆ ಮುಂದಾಗಿದ್ದ ಬಿಸಿಸಿಐಗೆ ಏಷ್ಯಾಕಪ್ನಲ್ಲಿನ ಫಲಿತಾಂಶ ಹೊಸ ಪಾಠ ಕಲಿಸಿದೆ. ಹೀಗಾಗಿ ಟಿ20 ವಿಶ್ವಕಪ್ ಮುನ್ನ ನಡೆಯಲಿರುವ ಸರಣಿಗಳ ಮೂಲಕ ಅತ್ಯುತ್ತಮ ಪ್ರದರ್ಶನ ನೀಡುವ ಬೌಲರ್ಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಮುಂದಾಗಿರುವುದು ಸ್ಪಷ್ಟ. ಇದೇ ಕಾರಣದಿಂದಾಗಿ ಮೊಹಮ್ಮದ್ ಶಮಿಗೆ ಮತ್ತೆ ತಂಡದಲ್ಲಿ ಅವಕಾಶ ಕಲ್ಪಿಸಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.