ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ಟೀಮ್ ಇಂಡಿಯಾ ಐರ್ಲೆಂಡ್ (India Tour of Ireland) ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಲಿದೆ. ಜೂನ್ ಕೊನೆಯ ವಾರದಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಈ ಎರಡೂ ಪಂದ್ಯಗಳು ಜೂನ್ 26 ಮತ್ತು 28 ರಂದು ಮಲಾಹೈಡ್‌ನಲ್ಲಿ ನಡೆಯಲಿವೆ. ಈ ಸರಣಿಗಾಗಿ ಇದೀಗ ಟೀಮ್ ಇಂಡಿಯಾ ಸಿಬ್ಬಂದಿಗಳನ್ನು ಬಿಸಿಸಿಐ ಆಯ್ಕೆ ಮಾಡಿಕೊಂಡಿದೆ. ಅದರಂತೆ ತಂಡದ ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಐರ್ಲೆಂಡ್ ವಿರುದ್ದ ಸರಣಿಗೆ ಟೀಮ್ ಇಂಡಿಯಾ ಮೀಸಲು ತಂಡವನ್ನು ಕಳುಹಿಸಲು ನಿರ್ಧರಿಸಿದೆ.
ಏಕೆಂದರೆ ಜುಲೈ 1 ರಿಂದ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸರಣಿ ಆಡಲಿದೆ. ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಪ್ರಮುಖ ಆಟಗಾರರು ಇಂಗ್ಲೆಂಡ್ ವಿರುದ್ದದ ಸರಣಿಗೆ ತೆರಳಲಿದೆ. ಹಾಗೆಯೇ ಐರ್ಲೆಂಡ್ ವಿರುದ್ದದ ಸರಣಿಗೆ ಮತ್ತೊಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಡದ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದು, ಜೊತೆಗೆ ಎನ್‌ಸಿಎ ತರಬೇತುದಾರರಾದ ಸಿತಾಂಶು ಕೊಟಕ್, ಸಾಯಿರಾಜ್ ಬಹುತುಲೆ ಮತ್ತು ಮುನಿಶ್ ಬಾಲಿ ಟೀಮ್ ಇಂಡಿಯಾ ಜೊತೆ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.
ಸಿತಾಂಶು ಕೋಟಾಕ್ ಈ ಹಿಂದೆ ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗೆಯೇ ಸಾಯಿರಾಜ್ ಬಹುತುಲೆ ಮತ್ತು ಬಾಲಿ ಅಂಡರ್-19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು. ಈ ಅನುಭವವನ್ನು ಪರಿಗಣಿಸಿ ಹೊಸ ಜವಾಬ್ದಾರಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೀಸಲು ತಂಡ ಐರ್ಲೆಂಡ್ ವಿರುದ್ದ 2 ಟಿ20 ಸರಣಿ ಆಡಲಿದೆ.
ವಿಶೇಷ ಎಂದರೆ ಭಾರತ ತಂಡ 4 ವರ್ಷಗಳ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮೊದಲು, 2018 ರಲ್ಲಿ, ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಿತು. ಇದೀಗ ಮತ್ತೊಮ್ಮೆ ಐರ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ಈ ಹಿಂದೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡುತ್ತಿದ್ದ ವೇಳೆ ಬಿಸಿಸಿಐ ಶಿಖರ್ ಧವನ್ ನಾಯಕತ್ವದಲ್ಲಿ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ದದ ಸರಣಿಗೆ ಕಳುಹಿಸಿತ್ತು. ಈ ಬಾರಿ ಕೂಡ ಇದೇ ಮಾದರಿಯಲ್ಲಿ ಬಿಸಿಸಿಐ ಎರಡು ತಂಡಗಳನ್ನು ರೂಪಿಸಲಿದ್ದು, ಮೀಸಲು ಟೀಮ್ ಇಂಡಿಯಾದ ನಾಯಕರಾಗಿ ಯಾರು ಆಯ್ಕೆಯಾಗಲಿದ್ದಾರೆ ಕಾದು ನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.