
ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೊದಲ ಏಕದಿನ ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಮಳೆ ಪೀಡಿತ ಈ ಪಂದ್ಯವನ್ನು ತಲಾ 25 ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಆರಂಭಿಕ ರಹಮಾನುಲ್ಲಾ ಗುರ್ಬಾಜ್ (Rahmanullah Gurbaz) ಅವರ ಸ್ಫೋಟಕ ಶತಕದ ನೆರವಿನಿಂದ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ (Shubman Gill) ಅವರ ಅಜೇಯ ಅರ್ಧಶತಕದ ಇನ್ನಿಂಗ್ಸ್ ಹಾಗೂ ಕೆಎಲ್ ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಕೇವಲ 16 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ತಂಡದ ಪರ ಏಕಾಂಗಿ ಹೋರಾಟ ನೀಡಿದ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಅಫ್ಘನ್ ಪರ ಗುರ್ಬಾಜ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗೆ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಯಾವುದೇ ಬ್ಯಾಟ್ಸ್ಮನ್ಗೂ 30 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ರಹಮಾನುಲ್ಲಾ ಗುರ್ಬಾಜ್ 51 ಎಸೆತಗಳಲ್ಲಿ 8 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 102 ರನ್ ಗಳಿಸಿದರೆ, ಹಶ್ಮತುಲ್ಲಾ ಶಾಹಿದಿ 27 ಮತ್ತು ಅಜ್ಮತುಲ್ಲಾ ಒಮರ್‌ಜೈ 26 ರನ್ ಗಳಿಸಿದರು. ಇಬ್ರಾಹಿಂ ಜದ್ರಾನ್ 1, ಸೆಡಿಕುಲ್ಲಾ ಅತ್ತರ್ 0, ರಹಮತ್ ಶಾ 3, ಮೊಹಮ್ಮದ್ ನಬಿ 9, ರಶೀದ್ ಖಾನ್ 9, ಎಎಂ ಗಜನ್‌ಫರ್ 0, ಜಿಯಾ ಉರ್ ರೆಹಮಾನ್ ಶರೀಫಿ 4 ರನ್‌ಗಳಿಗೆ ಔಟಾದರು.
ಈ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸಾಧಾರಣ ಆರಂಭ ಒದಗಿಸಿಕೊಟ್ಟರು. ಅನುಭವಿ ರೋಹಿತ್ ಶರ್ಮಾ 16 ರನ್‌ಗಳಿಸಿದ್ದಾಗ ರನ್ಗೆ ಬಲಿಯಾದರು. ಆ ನಂತರ ನಾಯಕ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಜೋಡಿ ಎರಡನೇ ವಿಕೆಟ್‌ಗೆ 43 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟವಾಡಿತು. ಇಶಾನ್ ಕಿಶನ್ 34 ರನ್‌ಗಳಿಗೆ ಔಟಾದ ನಂತರ, ಮೈದಾನಕ್ಕೆ ಬಂದ ಶ್ರೇಯಸ್ ಅಯ್ಯರ್ ಅವರ ಆಟ 15 ಎಸೆತಗಳಲ್ಲಿ 12 ರನ್‌ಗಳೊಂದಿಗೆ ಕೊನೆಗೊಂಡಿತು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಶುಭಮನ್ ಗಿಲ್ ನಾಯಕನ ಆಟವನ್ನು ಮುಂದುವರೆಸಿದರು.
IND vs AFG: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಹರ್ಷ್ ದುಬೆ, ಗುರ್ನೂರ್ ಬ್ರಾರ್
ಶುಭ್‌ಮನ್ ಗಿಲ್ ಕೊನೆಯವರೆಗೂ ಅಜೇಯರಾಗಿ ಉಳಿದು ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. ಶುಭ್‌ಮನ್ ಗಿಲ್ 66 ಎಸೆತಗಳಲ್ಲಿ 44 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 84 ರನ್ ಬಾರಿಸಿದರೆ, ಕೆಎಲ್ ರಾಹುಲ್ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 39 ರನ್ ಗಳಿಸಿದರು. ಇನ್ನು ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್ 17 ರಂದು ನಡೆಯಲಿದೆ. ಈ ಪಂದ್ಯ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿಯನ್ನು ತಮ್ಮದಾಗಿಸಿಕೊಳ್ಳಲಿದೆ. ಇತ್ತ ಅಫ್ಘಾನಿಸ್ತಾನ ಗೆದ್ದರೆ, ಸರಣಿ 1-1 ರಲ್ಲಿ ಸಮಬಲಗೊಳ್ಳುತ್ತದೆ.
Published On - 10:08 pm, Sat, 13 June 26