IND vs AUS: ಕೇವಲ 55 ನಿಮಿಷ, 66 ಎಸೆತಗಳಲ್ಲೇ ಮುಗಿದ ಪಂದ್ಯ! ಭಾರತಕ್ಕೆ 10 ವಿಕೆಟ್ ಸೋಲು

|

Updated on: Mar 19, 2023 | 5:57 PM

IND vs AUS: ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರಾಹುಲ್ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದಿಂದ ಗೆದ್ದು ಬೀಗಿದ್ದ ಭಾರತ, ವಿಶಾಖಪಟ್ಟಣದಲ್ಲಿ ಹೀನಾಯ ಸೋಲು ಅನುಭವಿಸಿದೆ.

IND vs AUS: ಕೇವಲ 55 ನಿಮಿಷ, 66 ಎಸೆತಗಳಲ್ಲೇ ಮುಗಿದ ಪಂದ್ಯ! ಭಾರತಕ್ಕೆ 10 ವಿಕೆಟ್ ಸೋಲು
ಆಸ್ಟ್ರೇಲಿಯಾ ತಂಡ
Follow us on

ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ರಾಹುಲ್ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದಿಂದ ಗೆದ್ದು ಬೀಗಿದ್ದ ಭಾರತ, ವಿಶಾಖಪಟ್ಟಣದಲ್ಲಿ (Visakhapatnam) ಹೀನಾಯ ಸೋಲು ಅನುಭವಿಸಿದೆ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ 55 ನಿಮಿಷ ಮತ್ತು 66 ಎಸೆತಗಳಲ್ಲಿ 10 ವಿಕೆಟ್‌ಗಳಿಂದ ಭಾರತವನ್ನು (India Vs Australia) ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ. ಮೊದಲಿಗೆ ಬೌಲಿಂಗ್​ನಲ್ಲಿ ಮಾರಕ ದಾಳಿ ನಡೆಸಿ, ಮಿಚೆಲ್ ಸ್ಟಾರ್ಕ್ (Mitchell Starc) ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕೇವಲ 117 ರನ್‌ಗಳಿಗೆ ಪೆವಿಲಿಯನ್​ ಸೇರುವಂತೆ ಮಾಡಿದರೆ, ಆ ನಂತರ ಬ್ಯಾಟಿಂಗ್​ನಲ್ಲಿ ಸುನಾಮಿ ಸೃಷ್ಟಿಸಿದ ಮಿಚೆಲ್ ಮಾರ್ಷ್ (Mitchell Marsh)​ ಹಾಗೂ ಟ್ರಾವಿಸ್ ಹೆಡ್ (Travis Head) ಕೇವಲ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಪಂದ್ಯ ಮುಗಿಸಿದರು.

ವಾಸ್ತವವಾಗಿ ಭಾನುವಾರ ರಜೆ ದಿನವಾಗಿದ್ದರಿಂದ ಭರ್ಜರಿ ಮನರಂಜನೆ ಸಿಗುವುದೆಂದು ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ಟೀಂ ಇಂಡಿಯಾ ಅಕ್ಷರಶಃ ನಿರಾಸೆ ಮೂಡಿಸಿತು. ಅದರಲ್ಲೂ ವಿಶಾಖಪಟ್ಟಣಂ ಮೈದಾನದಲ್ಲಿ ಇದುವರೆಗೆ ಟೀಂ ಇಂಡಿಯಾ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದರಿಂದ ಈ ಪಂದ್ಯದಲ್ಲೂ ಭಾರತವೇ ಗೆಲುವಿನ ಫೆವರೇಟ್ ಎನಿಸಿಕೊಂಡಿತ್ತು. ಆದರೆ ಪಂದ್ಯ ಆರಂಭವಾದ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು.

ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಹೇಗೋ ಗೆದ್ದ ಭಾರತ ತಂಡ ವಿಶಾಖಪಟ್ಟಣಂನ ತಮ್ಮ ನೆಚ್ಚಿನ ಮೈದಾನದಲ್ಲಿ ಕೇವಲ 4 ಗಂಟೆಗಳಲ್ಲಿ ಪಂದ್ಯವನ್ನು ಸೋತಿತು. ಮಧ್ಯಾಹ್ನ ಒಂದೂವರೆ ಗಂಟೆಗೆ ಆರಂಭವಾದ ಪಂದ್ಯ ಸರಿಯಾಗಿ ಐದೂವರೆ ಗಂಟೆಗೆ ಮುಕ್ತಾಯವಾಯಿತು.

IND vs AUS: ಆಸೀಸ್ ದಾಳಿಗೆ ಕಂಗಾಲಾದ ರೋಹಿತ್ ಪಡೆ; 117 ರನ್​ಗಳಿಗೆ ಆಲೌಟ್!

ಭಾರತದ ಇನ್ನಿಂಗ್ಸ್ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಓವರ್​ನಲ್ಲೇ ಆಘಾತ ಎದುರಿಸಿತು. ಆರಂಭಿಕ ಗಿಲ್, ಖಾತೆ ತೆರೆಯಲೂ ಸಾಧ್ಯವಾಗದೆ ಮಿಚೆಲ್ ಸ್ಟಾರ್ಕ್​ಗೆ ಬಲಿಯಾದರು. ಇದರ ನಂತರ, ಐದನೇ ಓವರ್‌ನಲ್ಲಿ ಸ್ಟಾರ್ಕ್ ರೋಹಿತ್ ಶರ್ಮಾ ಮತ್ತು ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಒಂದರ ನಂತರ ಒಂದರಂತೆ ಎರಡು ಎಸೆತಗಳಲ್ಲಿ ಔಟ್ ಮಾಡಿದರು. ನಾಲ್ಕು ಓವರ್‌ಗಳ ನಂತರ ಕೆಎಲ್ ರಾಹುಲ್ ಕೂಡ 9 ರನ್ ಗಳಿಸಿ ಸ್ಟಾರ್ಕ್‌ಗೆ ಬಲಿಯಾದರು. 2019 ರ ವಿಶ್ವಕಪ್ ಸೆಮಿಫೈನಲ್ ನಂತರ ಟೀಮ್ ಇಂಡಿಯಾ ಏಕದಿನ ಮಾದರಿಯಲ್ಲಿ ಪವರ್‌ಪ್ಲೇಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು.

ರಾಹುಲ್ ವಿಕೆಟ್ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಕೂಡ ಹೆಚ್ಚು ಹೊತ್ತು ನಿಲ್ಲಲ್ಲಿಲ್ಲ. ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಪಾಂಡ್ಯ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಇಲ್ಲಿಂದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಭಾರತ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು, ಆದರೆ ನಾಥನ್ ಎಲ್ಲಿಸ್ ಇದಕ್ಕೆ ಅವಕಾಶ ನೀಡಲಿಲ್ಲ. ಮೊದಲು ವಿರಾಟ್ ಕೊಹ್ಲಿ (31 ರನ್) ಯನ್ನು ಔಟ್ ಮಾಡಿದ ಎಲ್ಲಿಸ್, ನಂತರ ರವೀಂದ್ರ ಜಡೇಜಾ (16 ರನ್) ಅವರನ್ನು ಔಟ್ ಮಾಡಿದರು. ಅಕ್ಷರ್ ಪಟೇಲ್ ಒಂದು ತುದಿಯಲ್ಲಿ ನಿಂತು 29 ರನ್ ಗಳಿಸಿ, ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಯಾವುದೇ ಆಟಗಾರನಿಂದ ಬೆಂಬಲ ಸಿಗಲಿಲ್ಲ. ನಾಲ್ಕು ರನ್ ಗಳಿಸಿ ಕುಲ್ದೀಪ್ ಔಟಾದರೆ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಟೀಂ ಇಂಡಿಯಾ ಕೇವಲ 26 ಓವರ್‌ಗಳಿಗೆ ಇನ್ನಿಂಗ್ಸ್​ ಮುಗಿಸಿತು. ಇತ್ತ ಆತಿಥೇಯರನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾಕ್ಕೆ ಕೇವಲ ಎರಡು ಗಂಟೆ 20 ನಿಮಿಷಗಳು ಬೇಕಾಯಿತು.

ಆಸೀಸ್ ಆರ್ಭಟಕ್ಕೆ ಬ್ರೇಕ್ ಹಾಕಲಾಗಲಿಲ್ಲ

ಇನ್ನು ಈ ಸಾಧಾರಣ ಗುರಿಯೊಂದಿಗೆ ಮೈದಾನಕ್ಕಿಳಿದ ಆಸೀಸ್ ದಾಂಡಿಗರು ಆರಂಭದಿಂದಲೂ ಟೀಂ ಇಂಡಿಯಾ ವೇಗಿಗಳ ಮೇಲೆ ಮುರಿದುಬಿದ್ದರು.  ಹೀಗಾಗಿ ಕೇವಲ 55 ನಿಮಿಷದೊಳಗೆ ಪಂದ್ಯ ಕೊನೆಗೊಂಡಿತು. ಆಸೀಸ್ ಆರಂಭಿಕರ ಆರ್ಭಟಕ್ಕೆ ಬ್ರೇಕ್ ಹಾಕಲು ಟೀಂ ಇಂಡಿಯಾ ನಾಯಕ ಎಷ್ಟೆಲ್ಲ ಪ್ರಯತ್ನ ಪಟ್ಟರು ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮಾರ್ಷ್​, 6 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 66 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ 10 ಬೌಂಡರಿ ಸಹಿತ 51 ರನ್ ಬಾರಿಸಿ ಅಜೇಯರಾಗಿ ಪೆವಿಲಿಯನ್​ಗೆ ಮರಳಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Sun, 19 March 23