ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ದ್ವಿತೀಯ ಟಿ20 ಕದನ ರಣ ರೋಚಕವಾಗಿತ್ತು. ಮೈದಾನ ಒದ್ದೆಯಿದ್ದ ಪರಿಣಾಮ ತಡವಾಗಿ ಪ್ರಾರಂಭಗೊಂಡ ಪಂದ್ಯವನ್ನು 8 ಓವರ್ಗೆ ಸೀಮಿತಗೊಳಿಸಲಾಯಿತು. ಇದರಲ್ಲಿ ಭಾರತ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 1-1 ಅಂತರದಿಂದ ಸರಣಿ ಸಮಬಲ ಸಾಧಿಸಿದೆ. 91 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ (Team India) ಸ್ಫೋಟಕ ಬ್ಯಾಟಿಂಗ್ ನಡೆಸಿತು. ಅದರಲ್ಲೂ ನಾಯಕನ ಆಟವಾಡಿದ ರೋಹಿತ್ ಶರ್ಮಾ (Rohit Sharma) ಕೊನೆಯವರೆಗೂ ನಿಂತು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಇದರ ಜೊತೆಗೆ ಟಿ20 ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಕೇವಲ 20 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್ ಸಿಡಿಸಿದ ರೋಹಿತ್ ಅಜೇಯ 46 ರನ್ ಚಚ್ಚಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ವಿಶ್ವ ದಾಖಲೆಯನ್ನು ಪುಡಿ ಮಾಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಪಟ್ಟಿಯಲ್ಲಿ ರೋಹಿತ್ ಹಾಗೂ ಗಪ್ಟಿಲ್ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಇದೀಗ ರೋಹಿತ್ 176 ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದರು.
ಸದ್ಯ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಪಟ್ಟಿಯಲ್ಲಿ ರೋಹಿತ್ ಮೊದಲಿಗರಾಗಿದ್ದಾರೆ. ಎರಡನೇ ಸ್ಥಾನದಲ್ಲಿ 172 ಸಿಕ್ಸರ್ನೊಂದಿಗೆ ಮಾರ್ಟಿನ್ ಗಪ್ಟಿಲ್ ಅವರಿದ್ದಾರೆ. ಕ್ರಿಸ್ ಗೇಲ್ 79 ಪಂದ್ಯಗಳಲ್ಲಿ 124 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತರಾದ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ (120 ಸಿಕ್ಸರ್) ಮತ್ತು ಆಸ್ಟ್ರೇಲಿಯದ ಟಿ20 ತಂಡದ ನಾಯಕ ಆ್ಯರನ್ ಫಿಂಚ್ (117) ಕೂಡ ಈ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ನಾಗ್ಪುರದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 8 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತು. ತಂಡದ ಪರ ನಾಯಕ ಆರೋನ್ ಫಿಂಚ್ 15 ಎಸೆತಗಳಲ್ಲಿ 31 ರನ್ ಸಿಡಿಸಿದರೆ, ಮ್ಯಾಥ್ಯೂ ವೇಡ್ ಕೇವಲ 20 ಎಸೆತಗಳಲ್ಲಿ ಅಜೇಯ 43 ರನ್ ಚಚ್ಚಿದರು. ಭಾರತ ಅಕ್ಷರ್ ಪಟೇಲ್ ಎರಡು ಓವರ್‌ಗಳಿಗೆ ಕೇವಲ 13 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಿತ್ತರು.
91 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ 2.5 ಓವರ್‌ಗಳಿಗೆ 39 ರನ್ ಸಿಡಿಸುವ ಮೂಲಕ ಭರ್ಜರಿ ಆರಂಭ ತಂದುಕೊಟ್ಟರು. ಕೆ.ಎಲ್ ರಾಹುಲ್(10), ವಿರಾಟ್ ಕೊಹ್ಲಿ(11) ಹಾಗೂ ಸೂರ್ಯಕುಮಾರ್ ಯಾದವ್(0) ಅವರನ್ನು ಆಡಂ ಝಾಂಪ ಅವರು ಔಟ್ ಮಾಡಿದರು. ಒಂದು ತುದಿಯಲ್ಲಿ ಆರಂಭದಿಂದಲೂ ಸ್ಪೋಟಕ ಬ್ಯಾಟ್ ಮಾಡಿದ ನಾಯಕ ರೋಹಿತ್ ಶರ್ಮಾ, ಆಸೀಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಕೊನೆಯ ಓವರ್‌ನಲ್ಲಿ 9 ರನ್ ಅಗತ್ಯವಿದ್ದ ವೇಳೆ ಮೊದಲ ಎರಡು ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಹಾಗೂ ಬೌಂಡರಿ ಸಿಡಿಸುವ ಮೂಲಕ ರೋಚಕ ಗೆಲುವು ತಂದುಕೊಟ್ಟರು.
Published On - 8:32 am, Sat, 24 September 22