Duleep Trophy: ಫೈನಲ್​ನಲ್ಲಿ ಜೈಸ್ವಾಲ್ ಅಬ್ಬರದ ದ್ವಿಶತಕ! ಟೀಂ ಇಂಡಿಯಾ ಮಾಜಿ ನಾಯಕನ ದಾಖಲೆ ಪುಡಿಪುಡಿ

Yashasvi Jaiswal: ಜೈಸ್ವಾಲ್ ತಮ್ಮ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

Duleep Trophy: ಫೈನಲ್​ನಲ್ಲಿ ಜೈಸ್ವಾಲ್ ಅಬ್ಬರದ ದ್ವಿಶತಕ! ಟೀಂ ಇಂಡಿಯಾ ಮಾಜಿ ನಾಯಕನ ದಾಖಲೆ ಪುಡಿಪುಡಿ
Yashasvi Jaiswal
Follow us
TV9 Web
| Updated By: ಪೃಥ್ವಿಶಂಕರ

Updated on: Sep 23, 2022 | 5:56 PM

ಕೊಯಮತ್ತೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ (Duleep Trophy) ಫೈನಲ್‌ನಲ್ಲಿ ಪಶ್ಚಿಮ ವಲಯ ತಂಡವು ದಕ್ಷಿಣ ವಲಯವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಪಶ್ಚಿಮ ವಲಯ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದೆ. ಪಂದ್ಯದ ಮೂರನೇ ದಿನವಾದ ಶುಕ್ರವಾರ ದಕ್ಷಿಣ ವಲಯದ ವಿರುದ್ಧ ಮುನ್ನಡೆ ಸಾಧಿಸುವಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ (Yashasvi Jaiswal) ಪ್ರಮುಖ ಪಾತ್ರ ವಹಿಸಿದ್ದಾರೆ. ಪಶ್ಚಿಮ ವಲಯದ ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ದ್ವಿಶತಕ ಸಿಡಿಸಿದ್ದು, ಈ ಮೂಲಕ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.

ಜೈಸ್ವಾಲ್ ತಮ್ಮ ಅದ್ಭುತ ಬ್ಯಾಟಿಂಗ್ ಆಧಾರದ ಮೇಲೆ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಭಾರತದ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜೈಸ್ವಾಲ್ ಯಾವುದೇ ಪ್ರಥಮ ದರ್ಜೆ ಪಂದ್ಯಾವಳಿಯ ಫೈನಲ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜೈಸ್ವಾಲ್ 20 ವರ್ಷ 269 ದಿನಗಳಲ್ಲಿ ಈ ದಾಖಲೆ ಮಾಡಿದ್ದಾರೆ. ಅದೇ ಸಮಯದಲ್ಲಿ, ವಾಡೇಕರ್ 20 ವರ್ಷ 354 ದಿನಗಳಲ್ಲಿ ಈ ಅದ್ಭುತ ದಾಖಲೆ ಮಾಡಿದ್ದರು. 1962ರಲ್ಲಿ ರಾಜಸ್ಥಾನ ವಿರುದ್ಧ ಬಾಂಬೆ ಪರ ಆಡುವಾಗ ವಾಡೇಕರ್ ಶತಕ ಬಾರಿಸಿದ್ದರು.

ಒಂದೇ ದಿನದಲ್ಲಿ ದ್ವಿಶತಕ

ಜೈಸ್ವಾಲ್ ಪಂದ್ಯದ ಮೂರನೇ ದಿನದಾಟವನ್ನು ಅಜೇಯ 209 ರನ್‌ಗಳೊಂದಿಗೆ ಅಂತ್ಯಗೊಳಿಸಿದರು. ಅವರೊಂದಿಗೆ ಸರ್ಫರಾಜ್ ಖಾನ್ 30 ರನ್ ಗಳಿಸಿ ಅಜೇಯರಾಗಿ ಉಳಿದರು. ದಿನದಾಟದ ಅಂತ್ಯಕ್ಕೆ ಪಶ್ಚಿಮ ವಲಯ ಮೂರು ವಿಕೆಟ್ ನಷ್ಟಕ್ಕೆ 376 ರನ್ ಗಳಿಸಿ ದಕ್ಷಿಣ ವಲಯದ ಮೇಲಿನ ಮುನ್ನಡೆಯನ್ನು 319 ರನ್ ಗಳಿಗೆ ವಿಸ್ತರಿಸಿದೆ. ದಿನದಾಟವನ್ನು ಆರಂಭಿಸಿದ ದಕ್ಷಿಣ ವಲಯದ ಸ್ಕೋರ್ ಏಳು ವಿಕೆಟ್ ನಷ್ಟಕ್ಕೆ 318 ರನ್ ಆಗಿತ್ತು. ಆದರೆ ಕೇವಲ ಒಂಬತ್ತು ರನ್‌ಗಳಲ್ಲಿ ತಂಡದ ಉಳಿದ ಮೂರು ವಿಕೆಟ್‌ಗಳು ಉರುಳಿದವು. ಆ ಮೂಲಕ ದಕ್ಷಿಣ ವಲಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 327 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡದ ಆರಂಭಿಕ ಬ್ಯಾಟರ್ ಜೈಸ್ವಾಲ್ ದಕ್ಷಿಣ ವಲಯದ ಬೌಲರ್‌ಗಳನ್ನು ಆರಂಭದಿಂದಲೂ ತೀವ್ರವಾಗಿ ದಂಡಿಸಿದರು.ಇದರ ಫಲವಾಗಿ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 244 ಎಸೆತಗಳನ್ನು ಆಡಿದ್ದು, 23 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಅಬ್ಬರಿಸಿದ ಅಯ್ಯರ್ ಬ್ಯಾಟ್

ಇವರಲ್ಲದೆ ಪ್ರಿಯಾಂಕ್ ಪಾಂಚಾಲ್ 40 ರನ್​ಗಳ ಇನ್ನಿಂಗ್ಸ್ ಆಡಿದರು. ಶ್ರೇಯಸ್ ಅಯ್ಯರ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿ ಅರ್ಧಶತಕ ಗಳಿಸಿದರು. 113 ಎಸೆತಗಳನ್ನು ಎದುರಿಸಿದ ಅಯ್ಯರ್ಮ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 71 ರನ್ ಗಳಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆಗೆ 15 ರನ್ ದಾಟಲು ಸಾಧ್ಯವಾಗಲಿಲ್ಲ. ಈ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿದ್ದ ಜೈಸ್ವಾಲ್ ಮತ್ತು ಅಯ್ಯರ್ ಇಬ್ಬರೂ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲರಾಗಿದ್ದರಯ. ಜೈಸ್ವಾಲ್ ಕೇವಲ ಒಂದು ರನ್ ಗಳಿಸಿ ಔಟಾದರೆ, ಅಯ್ಯರ್ ಬ್ಯಾಟ್‌ನಿಂದ ಕೇವಲ 37 ರನ್​ಗಳಷ್ಟೇ ಬಂದಿದ್ದವು. ಹೆಟ್ ಪಟೇಲ್ 98 ರನ್ ಗಳಿಸಿ ಪಶ್ಚಿಮ ವಲಯವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಕೊಂಡೊಯ್ದರು.