India vs Australia ODI: ಭಾರತ-ಆಸ್ಟ್ರೇಲಿಯಾ (IND vs AUS) ನಡುವಣ ಏಕದಿನ ಸರಣಿಯು ಮಾರ್ಚ್ 17 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯು ಮುಂಬೈ, ವಿಶಾಖಪಟ್ಟಣಂ ಹಾಗೂ ಚೆನ್ನೈನಲ್ಲಿ ನಡೆಯಲಿದೆ. ಆದರೆ ಶುಕ್ರವಾರ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದಿಂದ ಮೂವರು ಆಟಗಾರರು ಹೊರಗುಳಿದಿದ್ದಾರೆ. ಇವರಲ್ಲಿ ಇಬ್ಬರು ಟೀಮ್ ಇಂಡಿಯಾ (Team India) ಆಟಗಾರರಾದರೆ, ಮೂವರು ಆಸೀಸ್ ಕ್ರಿಕೆಟಿಗರು. ಇನ್ನು ಈ ಐವರಲ್ಲಿ ಒಬ್ಬರು 2ನೇ ಏಕದಿನ ಪಂದ್ಯದ ವೇಳೆ ತಂಡಕ್ಕೆ ಮರಳಲಿದ್ದಾರೆ. ಇದಾಗ್ಯೂ ನಾಲ್ವರು ಆಟಗಾರರು ಸರಣಿಯಿಂದಲೇ ಹೊರಗುಳಿದಿದ್ದಾರೆ.
ಹೌದು, ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಭಾವಮೈದ ಮದುವೆ ನಿಮ್ಮಿತ್ತ ಹಿಟ್ಮ್ಯಾನ್ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದಾಗ್ಯೂ ಮಾರ್ಚ್ 19 ರಂದು ನಡೆಯಲಿರುವ 2ನೇ ಏಕದಿನ ಪಂದ್ಯದ ವೇಳೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಕೂಡ ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಯ್ಯರ್ ಇಡೀ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವುದಿಲ್ಲ.
ಹಾಗೆಯೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆ ತಂಡವನ್ನು ತೊರೆದಿದ್ದ ಪ್ಯಾಟ್ ಕಮಿನ್ಸ್ ಅವರ ತಾಯಿ ನಿಧನರಾಗಿದ್ದಾರೆ. ಹೀಗಾಗಿ ಅವರು ಏಕದಿನ ಸರಣಿಯಿಂದಲೂ ಕೂಡ ಹಿಂದೆ ಸರಿದಿದ್ದಾರೆ. ಇನ್ನು ಕಮಿನ್ಸ್ ಅಲಭ್ಯತೆಯ ನಡುವೆ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ.
ಅದೇ ರೀತಿ ಈ ಸರಣಿಗೆ ಆಯ್ಕೆಯಾಗಿದ್ದ ಆಸ್ಟ್ರೇಲಿಯಾ ತಂಡದ ವೇಗಿಗಳಾದ ಜೋಶ್ ಹ್ಯಾಝಲ್ವುಡ್ ಹಾಗೂ ಜ್ಯೆ ರಿಚರ್ಡ್ಸನ್ ಕೂಡ ಗಾಯಗೊಂಡಿರುವ ಹಿನ್ನಲೆ ಹೊರಗುಳಿದಿದ್ದಾರೆ. ಹೀಗಾಗಿ ಮೊದಲ ಪಂದ್ಯದ ವೇಳೆ ಈ ಐವರು ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಭಾರತ ಏಕದಿನ ತಂಡ:
ಹಾರ್ದಿಕ್ ಪಾಂಡ್ಯ (ನಾಯಕ-ಮೊದಲ ಏಕದಿನ) ರೋಹಿತ್ ಶರ್ಮಾ (ಮೊದಲ ಪಂದ್ಯಕ್ಕೆ ಅಲಭ್ಯ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನಾದ್ಕಟ್.
ಆಸ್ಟ್ರೇಲಿಯಾ ಏಕದಿನ ತಂಡ:
ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.