
ಭಾರತ ತಂಡ ಪ್ರಸ್ತುತ ಆಸ್ಟ್ರೇಲಿಯಾ ( India vs Australia) ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಭಾನುವಾರದಿಂದ ಅಂದರೆ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಪರ್ತ್ ಮೈದಾನದಲ್ಲಿ ನಡೆಯಲಿದ್ದು, ಯುವ ಆರಂಭಿಕ ಶುಭ್ಮನ್ ಗಿಲ್ (shubman gill) ಭಾರತದ ನಾಯಕತ್ವ ವಹಿಸುತ್ತಿರುವುದರಿಂದ ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 7 ತಿಂಗಳುಗಳ ನಂತರ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡಿದೆ. ಆದಾಗ್ಯೂ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲಿ ಮಣಿಸುವುದು ಎಂದಿಗೂ ಸುಲಭವಲ್ಲ. ಇದಕ್ಕೆ ಪೂರಕವಾಗಿ ಅಂಕಿಅಂಶಗಳು ಕೂಡ ಟೀಂ ಇಂಡಿಯಾದ ವಿರುದ್ಧವಿರುವ ಕಾರಣ ಗಿಲ್ ಪಡೆ ಸರಣಿ ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಇಲ್ಲಿಯವರೆಗೆ 152 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದು, 84 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 52 ಪಂದ್ಯಗಳನ್ನು ಗೆದ್ದಿದೆ. ಹತ್ತು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಎರಡೂ ತಂಡಗಳು ಮಾರ್ಚ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದವು. ಉಭಯ ತಂಡಗಳ ನಡುವೆ ನಡೆದ ಆ ಸೆಮಿಫೈನಲ್ ಪಂದ್ಯವನ್ನು ಭಾರತ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.
ಆಸ್ಟ್ರೇಲಿಯಾದಲ್ಲಿ ಭಾರತದ ಏಕದಿನ ದಾಖಲೆ ತೀರ ಕಳಪೆಯಾಗಿದೆ. ಟೀಂ ಇಂಡಿಯಾ ಇದುವರೆಗೆ ಆಸ್ಟ್ರೇಲಿಯಾ ನೆಲದಲ್ಲಿ 54 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ 14 ಪಂದ್ಯಗಳನ್ನು ಮಾತ್ರ ಗೆದ್ದಿದ್ದರೆ, ಉಳಿದ 38 ಪಂದ್ಯಗಳನ್ನು ಸೋತಿದೆ. ಎರಡು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಆಸ್ಟ್ರೇಲಿಯಾದಲ್ಲಿ 2020 ರಲ್ಲಿ ತನ್ನ ಏಕದಿನ ಸರಣಿಯನ್ನಾಡಿದ್ದ ಭಾರತ ತಂಡ ಆ ಸರಣಿಯನ್ನು 1-2 ಅಂತರದಿಂದ ಸೋತಿತ್ತು. ಆ ಸಮಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕರಾಗಿದ್ದರು.
IND vs AUS: ಆಸೀಸ್ ತಂಡಕ್ಕೆ ಆಘಾತ; ಏಕದಿನ ಸರಣಿಯಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್
ಭಾರತ, ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ ಏಳು ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಭಾರತದ ವಿರುದ್ಧ ಎಂಟು ಸರಣಿಗಳನ್ನು ಗೆದ್ದಿದೆ. ಮುಂಬರುವ ಸರಣಿಯಲ್ಲಿ ಭಾರತ ತಂಡ ಈ ದಾಖಲೆಯನ್ನು ಸರಿಗಟ್ಟಲು ಪ್ರಯತ್ನಿಸುತ್ತಿದೆ. ಎರಡೂ ತಂಡಗಳು ಕೊನೆಯದಾಗಿ ಸೆಪ್ಟೆಂಬರ್ 2023 ರಲ್ಲಿ ದ್ವಿಪಕ್ಷೀಯ ಏಕದಿನ ಸರಣಿಯನ್ನು ಆಡಿದ್ದವು. 2023 ರ ಏಕದಿನ ವಿಶ್ವಕಪ್‌ಗೆ ಮೊದಲು ಭಾರತವು ಮೂರು ಪಂದ್ಯಗಳ ತವರು ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತು. ಆದಾಗ್ಯೂ ಆ ಬಳಿಕ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ, ಬಾರತವನ್ನು ಸೋಲಿಸಿ ವಿಶ್ವಕಪ್ ಎತ್ತಿ ಹಿಡಿದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ