IND vs AUS: ರನ್ ಮಳೆ ಹರಿಸುತ್ತಿದ್ದ ಟೀಂ ಇಂಡಿಯಾ ಗೆಲುವಿಗೆ ಅಡ್ಡಿಯಾದ ವರುಣ

India vs Australia T20: ಕ್ಯಾನ್‌ಬೆರಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ T20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9.4 ಓವರ್‌ಗಳಲ್ಲಿ 1 ವಿಕೆಟ್‌ಗೆ 97 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಶುಭ್​ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ಜೊತೆಯಾಟದೊಂದಿಗೆ ಅಬ್ಬರಿಸಿದ್ದರು. ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ರದ್ದುಪಡಿಸಲಾಯಿತು.

IND vs AUS: ರನ್ ಮಳೆ ಹರಿಸುತ್ತಿದ್ದ ಟೀಂ ಇಂಡಿಯಾ ಗೆಲುವಿಗೆ ಅಡ್ಡಿಯಾದ ವರುಣ
Ind Vs Aus

Updated on: Oct 29, 2025 | 5:03 PM

ಕ್ಯಾನ್‌ಬೆರಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮಳೆಯ ಮುನ್ಸೂಚನೆ ಇದ್ದ ಕಾರಣ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸಾಧಾರಣ ಆರಂಭ ಸಿಕ್ಕಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಮೊದಲ ವಿಕೆಟ್​ಗೆ 35 ರನ್​ಗಳ ಜೊತೆಯಾಟ ನೀಡಿದ್ದರು. ಆದರೆ 4ನೇ ಓವರ್​ನ ಐದನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು.

ಪಂದ್ಯಕ್ಕೆ ಮಳೆ ಅಡ್ಡಿ

ಅಭಿಷೇಕ್ ಔಟಾದ ಬಳಿಕ ಕ್ರೀಸ್​ಗೆ ಬಂದ ನಾಯಕ ಸೂರ್ಯಕುಮಾರ್, ಶುಭ್​ಮನ್ ಗಿಲ್ ಜೊತೆ ಇನ್ನಿಂಗ್ಸ್ ಮುನ್ನಡೆಸುತ್ತಿದ್ದರು. ಆದರೆ ಪಂದ್ಯದ ಐದನೇ ಓವರ್​ ನಡೆಯುವ ವೇಳೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಆಟವನ್ನು ಮೊದಲ ಬಾರಿಗೆ ಸ್ಥಗಿತಗೊಳಿಸಲಾಯಿತು. ಆ ನಂತರ ಮಳೆ ವಿರಾಮ ತೆಗೆದುಕೊಂಡ ಬಳಿಕ ಉಭಯ ತಂಡಗಳಿಗೆ ತಲಾ 2 ಓವರ್​ಗಳನ್ನು ಕಡಿತಗೊಳಿಸಿ ಅಂದರೆ ಪ್ರತಿ ತಂಡಕ್ಕೆ ತಲಾ 18 ಓವರ್​ಗಳನ್ನು ನಿಗದಿಪಡಿಸಿ ಆಟವನ್ನು ಮುಂದುವರೆಸಲಾಯಿತು.

ಸೂರ್ಯ- ಗಿಲ್ ಜೊತೆಯಾಟ

ಆ ಬಳಿಕ ಆಟ ಮುಂದುವರೆಸಿದ ಸೂರ್ಯ ಹಾಗೂ ಗಿಲ್ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು 100 ರನ್​ಗಳ ಸಮೀಪಕ್ಕೆ ತಂದರು. ಆದರೆ ಭಾರತದ ಇನ್ನಿಂಗ್ಸ್​ನ 10 ಓವರ್​ನಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಎರಡನೇ ಬಾರಿಗೆ ಆಟವನ್ನು ನಿಲ್ಲಿಸಲಾಯಿತು. ಈ ವೇಳೆಗೆ ಭಾರತ 9.4 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 97 ರನ್ ಗಳಿಸಿತ್ತು. ಆಟವನ್ನು ಮತ್ತೆ ಆರಂಭಿಸಲು ಸಾಕಷ್ಟು ಸಮಯ ಕಾಯಲಾಯಿತು. ಆದರೆ ಮಳೆ ತೀವ್ರಗೊಂಡ ಬಳಿಕ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಿದರು.

IND vs AUS: ಟೀಂ ಇಂಡಿಯಾಕ್ಕೆ ಆಘಾತ; ಮೊದಲ 3 ಟಿ20 ಪಂದ್ಯಗಳಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್

ಅಜೇಯ 62 ರನ್‌ಗಳ ಜೊತೆಯಾಟ

ಮಳೆಯಿಂದಾಗಿ ಈ ಪಂದ್ಯ ನಿಲ್ಲುವುದಕ್ಕೂ ಮುನ್ನ ಶುಭ್​ಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಭಾರತ ಪರ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಎರಡನೇ ವಿಕೆಟ್‌ಗೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಪಂದ್ಯ ಸ್ಥಗಿತಗೊಳ್ಳುವ ಮೊದಲು ಗಿಲ್ ಮತ್ತು ಸೂರ್ಯಕುಮಾರ್ ಯಾದವ್ 62 ರನ್‌ಗಳ ಜೊತೆಯಾಟ ನಡೆಸಿದ್ದರು. ಇದರಲ್ಲಿ ಸೂರ್ಯಕುಮಾರ್ 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 39 ರನ್ ಗಳಿಸಿದ್ದರೆ, ಗಿಲ್ 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 37 ರನ್ ಬಾರಿಸಿದ್ದರು. ಉಳಿದಂತೆ ನಾಥನ್ ಎಲ್ಲಿಸ್​ಗೆ ಬಲಿಯಾದ ಅಭಿಷೇಕ್ ಶರ್ಮಾ 19 ರನ್‌ಗಳ ಕಾಣಿಕೆ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Wed, 29 October 25