
2023ರ ಟಿ20 ವಿಶ್ವಕಪ್‌ನ (Women’s T20 World Cup 2023) ಫೈನಲ್ ಪ್ರವೇಶಿಸುವ ಭಾರತ ತಂಡದ ಕನಸು ಭಗ್ನಗೊಂಡಿದೆ. ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು 5 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (India Vs Australia) ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಸ್ಪರ್ಧಿ ಎಂದು ಪರಿಗಣಿಸದಿದ್ದರೂ ಕೊನೆಯ ಎಸೆತದವರೆಗೂ ಎರಡೂ ತಂಡಗಳ ನಡುವೆ ಭಾರಿ ಹೋರಾಟವೇ ನಡೆಯಿತು. ಇದರ ಹೊರತಾಗಿಯೂ ಟೀಂ ಇಂಡಿಯಾ (Team India) ಅಂತಿಮ ಟಿಕೆಟ್ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಟೀಂ ಇಂಡಿಯಾ ತನ್ನ ಕೈಯಾರೆ ಮಾಡಿದ ಪ್ರಮುಖ ತಪ್ಪುಗಳು. ಈ ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿದ್ದ ಭಾರತ ಸೋತಿತ್ತು. ಇದರ ಹಿಂದೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾತ್ರವಲ್ಲ, ಫೀಲ್ಡಿಂಗ್ ಕೂಡ ದೊಡ್ಡ ಕಾರಣವಾಗಿತ್ತು.
ಈ ಪಂದ್ಯದಲ್ಲಿ ಭಾರತದ ಸೋಲಿಗೆ ಫೀಲ್ಡಿಂಗ್ ಬಹುದೊಡ್ಡ ಕಾರಣವಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡವು ಅತ್ಯಂತ ಕಳಪೆ ಫೀಲ್ಡಿಂಗ್ ಮಾಡಿತು. ಇದರಿಂದಾಗಿ ಆಸ್ಟ್ರೇಲಿಯಾಕ್ಕೆ ಬೃಹತ್ ಟಾರ್ಗೆಟ್ ಸೆಟ್ ಮಾಡಲು ಸಾಧ್ಯವಾಯಿತು. ಲ್ಯಾನಿಂಗ್ ಮತ್ತು ಬೆತ್ ಮೂನಿ ಅವರ ಕ್ಯಾಚ್‌ಗಳನ್ನು ಒಳಗೊಂಡಂತೆ ಭಾರತ ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿತು. ಜೀವದಾನ ಪಡೆದ ಲ್ಯಾನಿಂಗ್ 49 ಮತ್ತು ಬೆತ್ ಮೂನಿ 54 ರನ್ ಗಳಿಸಿದರು. ಹಾಗೆಯೇ ಮಿಸ್‌ಫೀಲ್ಡ್‌ನಿಂದಾಗಿ ಬಹಳಷ್ಟು ಹೆಚ್ಚುವರಿ ರನ್ ಬಿಟ್ಟುಕೊಟ್ಟಿತು. ಆದರೆ ಇದಕ್ಕೆ ತದ್ವೀರುದ್ದವಾಗಿ ಆಸ್ಟ್ರೇಲಿಯಾ ತಂಡವು ಇಡೀ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿತು, ಇದರಿಂದಾಗಿ ಭಾರತ ಸೋಲಿನ ಭಾರವನ್ನು ಅನುಭವಿಸಬೇಕಾಯಿತು.
Team India: 6 ವರ್ಷ 5 ಸೋಲು; ಟೀಂ ಇಂಡಿಯಾದ ಈ ಸಂಕಟ ಕೊನೆಗೊಳ್ಳುವುದು ಯಾವಾಗ?
ಈ ಪಂದ್ಯದಲ್ಲಿ ಭಾರತದ ಸ್ಫೋಟಕ ಅಗ್ರ ಕ್ರಮಾಂಕ ಕೈಕೊಟ್ಟಿತು. ಶಫಾಲಿ ವರ್ಮಾ ಮತ್ತು ಉಪನಾಯಕಿ ಸ್ಮೃತಿ ಮಂಧಾನ ನಿರೀಕ್ಷಿತ ಬ್ಯಾಟಿಂಗ್ ಮಾಡಲಿಲ್ಲ. ಮಂಧಾನ 2 ಮತ್ತು ಶೆಫಾಲಿ ಕೇವಲ 9 ರನ್ ಗಳಿಸಿ ಔಟಾದರು. ಅದೇ ಸಮಯಕ್ಕೆ ಯಾಸ್ತಿಕಾ ಕೂಡ ಬಂದ ಕೂಡಲೇ ಹಿಂದಿರುಗಿದರು. ಹೀಗಾಗಿ ಭಾರತ ಮೊದಲ ನಾಲ್ಕು ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡಿತು.
ಭಾರತ ತಂಡವು ಆಸ್ಟ್ರೇಲಿಯಾವನ್ನು ಕನಿಷ್ಠ ಸ್ಕೋರ್‌ಗೆ ಕಟ್ಟಿ ಹಾಕುವ ಗುರಿ ಹೊಂದಿತ್ತು. ಟೂರ್ನಿಯುದ್ದಕ್ಕೂ ಅದ್ಬುತವಾಗಿ ಬೌಲಿಂಗ್ ಮಾಡಿದ್ದ ರೇಣುಕಾ ಠಾಕೂರ್ ಅವರಿಗೆ ಕೊನೆಯ ಓವರ್ ಬೌಲಿಂಗ್ ಜವಾಬ್ದಾರಿ ನೀಡಲಾಗಿತ್ತು. ಈ ಓವರ್‌ಗೆ ಮೊದಲು ಆಸ್ಟ್ರೇಲಿಯಾದ ಸ್ಕೋರ್ 154 ರನ್ ಆಗಿತ್ತು, ಆದರೆ ಕೊನೆಯಲ್ಲಿ ಅದು ಆರು ಎಸೆತಗಳಲ್ಲಿ 172 ತಲುಪಿತು, ಇದರಿಂದಾಗಿ ಭಾರತದ ಮೇಲೆ ಒತ್ತಡ ಹೆಚ್ಚಾಯಿತು.
ಭಾರತ ತಂಡದ ಕಳಪೆ ಆರಂಭದ ಹೊರತಾಗಿಯೂ, ಜೆಮಿಮಾ ರಾಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಉತ್ತಮ ಜೊತೆಯಾಟ ಆಡಿದರು. ಇಬ್ಬರು ಬ್ಯಾಟರ್ಗಳ ನಡುವೆ 68 ರನ್‌ಗಳ ಜೊತೆಯಾಟವಿತ್ತು. ಆದರೆ ಈ ವೇಳೆ ಜೆಮಿಮಾ ಅತ್ಯಂತ ಕೆಟ್ಟ ಹೊಡೆತಕ್ಕೆ ತನ್ನ ವಿಕೆಟ್ ಕಳೆದುಕೊಂಡರು. ಇಲ್ಲಿಂದ ಆಸ್ಟ್ರೇಲಿಯ ಪಂದ್ಯಕ್ಕೆ ಮರಳಿತು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ನಲ್ಲಿರುವುದರಿಂದ ಟೀಂ ಇಂಡಿಯಾ ಗೆಲುವು ಖಚಿತ ಎಂದು ಭಾವಿಸಲಾಗಿತ್ತು. ಆದಾಗ್ಯೂ, ಅವರು ತುಂಬಾ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದರು. ರನ್ಗಾಗಿ ಓಡುವ ವೇಳೆ ಕೌರ್ ಅವರ ಬ್ಯಾಟ್ ನೆಲಕ್ಕೆ ಸಿಲುಕಿಕೊಂಡಿತು, ಇದರಿಂದಾಗಿ ಅವರು ರನ್ ಔಟ್ ಆದರು. ಈ ವಿಕೆಟ್ ನಂತರ ಭಾರತ ಸೋಲಿನ ಹಾದಿ ಹಿಡಿಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ