IND vs BAN: ಕಾನ್ಪುರದಲ್ಲಿ ಮೊದಲ 3 ದಿನ ಭಾರಿ ಮಳೆಯ ಮುನ್ಸೂಚನೆ! ಪಂದ್ಯ ನಡೆಯುವುದು ಅನುಮಾನ

|

Updated on: Sep 26, 2024 | 10:35 PM

IND vs BAN Kanpur Weather Forecast: ಕಾನ್ಪುರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಕಷ್ಟು ಮಳೆಯಾಗುವ ಸಾಧ್ಯತೆಯಿದೆ. ಟೆಸ್ಟ್‌ನ ಮೊದಲ ದಿನದಂದು ಅಂದರೆ ಸೆಪ್ಟೆಂಬರ್ 27 ರಂದು 99% ಮೋಡ ಕವಿದ ವಾತಾವರಣವಿರಲಿದ್ದು, 93% ಮಳೆಯಾಗುವ ಸಾಧ್ಯತೆಯಿದೆ. ದಿನವಿಡೀ ಮಳೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಮಳೆಯ ತೀವ್ರತೆ ಹೆಚ್ಚಾಗಲಿದೆ.

IND vs BAN: ಕಾನ್ಪುರದಲ್ಲಿ ಮೊದಲ 3 ದಿನ ಭಾರಿ ಮಳೆಯ ಮುನ್ಸೂಚನೆ! ಪಂದ್ಯ ನಡೆಯುವುದು ಅನುಮಾನ
ಕಾನ್ಪುರ ಹವಾಮಾನ ವರದಿ
Follow us on

ಸೆಪ್ಟೆಂಬರ್ 27 ರಿಂದ ಅಂದರೆ ನಾಳೆಯಿಂದ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಹಾಗೂ ಟೀಂ ಇಂಡಿಯಾ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ಎರಡು ತಂಡಗಳು ಕಾನ್ಪುರದಲ್ಲಿದ್ದು, ಅಭ್ಯಾಸದಲ್ಲಿ ನಿರತವಾಗಿವೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ರೋಹಿತ್ ಪಡೆ 1-0 ಮುನ್ನಡೆ ಸಾಧಿಸಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 280 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ಎರಡನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಕ್ಲೀನ್ ಸ್ವೀಪ್ ಮಾಡಲು ಹೊರಟಿದೆ. ಇತ್ತ ಕಾನ್ಪುರ 2021ರ ನಂತರ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ.

ಹವಾಮಾನ ವರದಿ

ಕಾನ್ಪುರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಕಷ್ಟು ಮಳೆಯಾಗುವ ಸಾಧ್ಯತೆಯಿದೆ. ಟೆಸ್ಟ್‌ನ ಮೊದಲ ದಿನದಂದು ಅಂದರೆ ಸೆಪ್ಟೆಂಬರ್ 27 ರಂದು 99% ಮೋಡ ಕವಿದ ವಾತಾವರಣವಿರಲಿದ್ದು, 93% ಮಳೆಯಾಗುವ ಸಾಧ್ಯತೆಯಿದೆ. ದಿನವಿಡೀ ಮಳೆಯಾಗುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಮಳೆಯ ತೀವ್ರತೆ ಹೆಚ್ಚಾಗಲಿದೆ. ಟೆಸ್ಟ್ ಪಂದ್ಯದ ಎರಡನೇ ದಿನ ಮೋಡ ಕವಿದ ವಾತಾವರಣವಿದ್ದು, ಶೇ.80ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಇದೇ ವೇಳೆ ಮೂರನೇ ದಿನ ಶೇ.59 ರಷ್ಟು ಮೋಡ ಕವಿದಿದ್ದು, ಶೇ.75 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ನಾಲ್ಕನೇ ಮತ್ತು ಐದನೇ ದಿನದಂದು ಹವಾಮಾನವು ಸ್ಪಷ್ಟವಾಗಿರಲಿದ್ದು, ಮಳೆಯ ಸಾಧ್ಯತೆ ತೀರ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಭ್ಯಾಸಕ್ಕೂ ಮಳೆ ಅಡ್ಡಿ

ಇದಕ್ಕೆ ಪೂರಕವಾಗಿ ಈಗಾಗಲೇ ಕಾನ್ಪುರದಲ್ಲಿ ಮಳೆ ಸುರಿಯಲಾರಂಭಿಸಿದೆ. ಪಂದ್ಯಕ್ಕೆ ಒಂದು ದಿನಕ್ಕೆ ಮೊದಲು ಟೀಂ ಇಂಡಿಯಾ ಆಟಗಾರರು ಮಳೆಯ ನಡುವೆಯೇ ಅಭ್ಯಾಸದಲ್ಲಿ ಪಾಲ್ಗೊಂಡರು. ಮಳೆಯಿಂದಾಗಿ ಭಾರತ ತಂಡಕ್ಕೆ ಹೆಚ್ಚು ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಕಾನ್ಪುರದಲ್ಲಿ ಗುರುವಾರ ಹಲವು ಬಾರಿ ಮಳೆ ಅಡ್ಡಿಪಡಿಸಿತು. ಆದರೆ, ಆಟಗಾರರು ಕಳೆದ ಎರಡು ದಿನಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ. ಭಾರತ ತಂಡ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಈ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಂಪೂರ್ಣ ಸಜ್ಜಾಗಿರುವಂತಿದೆ.

ಎರಡನೇ ಟೆಸ್ಟ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ