ಕಿಯಾ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ (England vs India Odi) ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ವೇಗಿಗಳು ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ ಕೇವಲ 26 ರನ್ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತಂಡದ 5 ಪ್ರಮುಖ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ಮರಳಿದ್ದರು.
ಇದಾಗ್ಯೂ ನಾಯಕ ಜೋಸ್ ಬಟ್ಲರ್ 30 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆದರೆ ಮೊಹಮ್ಮದ್ ಶಮಿ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಹೋದ ಬಟ್ಲರ್ ಕೂಡ ಔಟಾದರು. ಒಂದು ಹಂತದಲ್ಲಿ ಕೇವಲ 68 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಡೇವಿಡ್ ವಿಲ್ಲಿ ಆಸರೆಯಾಗಿ ನಿಂತರು. ಅದರಂತೆ ವಿಲ್ಲಿ 21 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಇಂಗ್ಲೆಂಡ್ ತಂಡದ ಮೊತ್ತ ನೂರರ ಗಡಿದಾಟಿತು.
ಇದಾಗ್ಯೂ ಟೀಮ್ ಇಂಡಿಯಾ ಬೌಲರ್ಗಳ ಮುಂದೆ 26 ಓವರ್ಗಳನ್ನು ದಾಟಲು ಆಂಗ್ಲ ಆಟಗಾರರಿಗೆ ಸಾಧ್ಯವಾಗಿಲ್ಲ. ಅಂತಿಮವಾಗಿ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 25.2 ಓವರ್ಗಳಲ್ಲಿ ಕೇವಲ 110 ರನ್ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು.
ಇನ್ನು ಇಂಗ್ಲೆಂಡ್ ನೀಡಿದ 111 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದ್ದರು. ಅತ್ಯುತ್ತಮ ಜೊತೆಯಾಟವಾಡಿದ ಈ ಜೋಡಿ ಎಲ್ಲಾ ಹಂತದಲ್ಲೂ ಇಂಗ್ಲೆಂಡ್ ಬೌಲರ್ಗಳ ವಿರುದ್ದ ಮೇಲುಗೈ ಸಾಧಿಸಿದರು. ಅದರಂತೆ ರೋಹಿತ್ ಶರ್ಮಾ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಶಿಖರ್ ಧವನ್ ಉತ್ತಮ ಸಾಥ್ ನೀಡಿದರು.
ಅಂತಿಮವಾಗಿ ರೋಹಿತ್ ಶರ್ಜಾ ಅಜೇಯ 76 (58) ರನ್ ಬಾರಿಸಿದರೆ, ಶಿಖರ್ ಧವನ್ ಅಜೇಯ 31 (54) ರನ್ ಕಲೆಹಾಕಿದರು. ಪರಿಣಾಮ 18.4 ಓವರ್ಗಳಲ್ಲಿ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 114 ರನ್ ಬಾರಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ. ಇನ್ನು ಈ ಪಂದ್ಯದಲ್ಲಿ 7.2 ಓವರ್ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಉರುಳಿಸಿ ಮಿಂಚಿದ್ದ ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
Published On - 9:44 pm, Tue, 12 July 22