Updated on:Jul 12, 2022 | 7:42 PM
ಕಿಯಾ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್ ಪ್ರದರ್ಶಿಸಿದೆ. ಕೇವಲ 26 ರನ್ಗಳಿಗೆ 5 ವಿಕೆಟ್ ಉರುಳಿಸಿದ ಟೀಮ್ ಇಂಡಿಯಾ ಬೌಲರ್ಗಳು ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು.
ಈ ಆಘಾತದಿಂದ ಇಂಗ್ಲೆಂಡ್ ತಂಡಕ್ಕೆ ಮೇಲೇರಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಆಂಗ್ಲರು 110 ರನ್ಗಳಿಗೆ ಆಲೌಟ್ ಆಯಿತು. ಇತ್ತ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಉರುಳಿಸಿ ಮಿಂಚಿದರು. ವಿಶೇಷ ಎಂದರೆ ಮೂರು ವಿಕೆಟ್ ಉರುಳಿಸುವ ಮೂಲಕ ಮೊಹಮ್ಮದ್ ಶಮಿ ವಿಶೇಷ ದಾಖಲೆಯನ್ನು ಬರೆದರು.
ಹೌದು, ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 150 ವಿಕೆಟ್ ಪಡೆದ ದಾಖಲೆ ಇದೀಗ ಮೊಹಮ್ಮದ್ ಶಮಿ ಪಾಲಾಗಿದೆ. ಶಮಿ ಕೇವಲ 80 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅತೀ ವೇಗವಾಗಿ 150 ವಿಕೆಟ್ ಪಡೆದ ವಿಶ್ವದ 2ನೇ ವೇಗಿ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 77 ಪಂದ್ಯಗಳಲ್ಲಿ 150 ವಿಕೆಟ್ ಉರುಳಿಸಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗವಾಗಿ ಈ 150 ವಿಕೆಟ್ ಕಬಳಿಸಿದ ಬೌಲರ್ ಎಂಬ ದಾಖಲೆಯನ್ನು ಶಮಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಮಾಜಿ ವೇಗಿ ಅಜಿತ್ ಅಗರ್ಕರ್ ಹೆಸರಿನಲ್ಲಿತ್ತು.
ಅಜಿತ್ ಅಗರ್ಕರ್ 97 ಪಂದ್ಯಗಳ ಮೂಲಕ 150 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ ಮೊಹಮ್ಮದ್ ಶಮಿ ಕೇವಲ 80 ಪಂದ್ಯಗಳ ಮೂಲಕ 150 ವಿಕೆಟ್ ಉರುಳಿಸಿ ಹೊಸ ದಾಖಲೆ ಬರೆದಿದ್ದಾರೆ.
Published On - 7:42 pm, Tue, 12 July 22