ನಾಟಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ (India vs England 1st Test) ನಡುವಣ ಟೆಸ್ಟ್ ಪಂದ್ಯವು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದಲ್ಲಿ ಗೆಲ್ಲಲು ಭಾರತಕ್ಕೆ ಕೇವಲ 157 ರನ್ಗಳ ಅವಶ್ಯಕತೆಯಿದೆ. ಆದರೆ ಅತ್ತ 5ನೇ ದಿನ ವರುಣನ ಅಡ್ಡಿಯಿಂದ ಪಂದ್ಯವು ಡ್ರಾ ಆಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ (England) 183 ರನ್ಗಳಿಸಿದರೆ, 2ನೇ ಇನಿಂಗ್ಸ್ನಲ್ಲಿ 303 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್ನ್ನು 278 ರನ್ಗಳೊಂದಿಗೆ ಅಂತ್ಯಗೊಳಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದ ಟೀಮ್ ಇಂಡಿಯಾ (Team India) 2ನೇ ಇನಿಂಗ್ಸ್ನಲ್ಲಿ 209 ರನ್ಗಳಿಸಬೇಕಿದೆ. ಇದೀಗ ಒಂದು ವಿಕೆಟ್ ನಷ್ಟಕ್ಕೆ ಭಾರತ 52 ರನ್ಗಳಿಸಿದ್ದು, ಅಂತಿಮ ದಿನದಾಟದಲ್ಲಿ 157 ರನ್ಗಳನ್ನು ಕಲೆಹಾಕಬೇಕಿದೆ. ಒಂದು ವೇಳೆ ಭಾರತ ಮಳೆಯ ನಡುವೆ ಈ ಟಾರ್ಗೆಟ್ನ್ನು ಬೆನ್ನತ್ತಿದರೆ ಇಂಗ್ಲೆಂಡ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ಹೌದು, ಭಾರತ 1932 ರಿಂದ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡುತ್ತಿದೆ. ಉಭಯ ತಂಡಗಳು ಇದುವರೆಗೆ 63 ಟೆಸ್ಟ್ ಪಂದ್ಯವನ್ನಾಡಿದೆ. ಅದರಲ್ಲಿ ಟೀಮ್ ಇಂಡಿಯಾ ಗೆದ್ದಿರೋದು ಕೇವಲ 7 ಟೆಸ್ಟ್‌ಗಳನ್ನು ಮಾತ್ರ. ಉಳಿದ 34 ಪಂದ್ಯಗಳಲ್ಲಿ ಸೋತರೆ, 21 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಆದರೆ ಇದುವರೆಗೆ ಇಂಗ್ಲೆಂಡ್ನ ಯಾವುದೇ ಮೈದಾನದಲ್ಲಿ ಭಾರತ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿಲ್ಲ ಎಂಬುದೇ ಅಚ್ಚರಿ. ಟೀಮ್ ಇಂಡಿಯಾ ಇದುವರೆಗೆ ಇಂಗ್ಲೆಂಡ್‌ನಲ್ಲಿ 7 ಮೈದಾನಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಯಾವುದೇ ಪಿಚ್ನಲ್ಲಿ 2ಕ್ಕಿಂತ ಹೆಚ್ಚು ಬಾರಿ ಗೆದ್ದಿಲ್ಲ.
ನಾಟಿಂಗ್ಹ್ಯಾಮ್ ನಲ್ಲಿ ಭಾರತ-ಇಂಗ್ಲೆಂಡ್ ಇದುವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ 2 ಜಯ ಸಾಧಿಸಿದರೆ, 2 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 3 ಪಂದ್ಯಗಳು ಡ್ರಾ ಆಗಿವೆ. ಇನ್ನು ಲೀಡ್ಸ್‌ನಲ್ಲಿ ಭಾರತ ತಂಡವು 6 ಪಂದ್ಯಗಳನ್ನು ಆಡಿದೆ. ಅದರಲ್ಲಿ 2 ರಲ್ಲಿ ಗೆದ್ದರೆ, 3 ರಲ್ಲಿ ಸೋತಿದೆ. 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಅದೇ ರೀತಿ ಲಾರ್ಡ್ಸ್‌ನಲ್ಲಿ ಆಡಲಾದ 18 ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ. ಉಳಿದ 12 ರಲ್ಲಿ ಸೋತರೆ, 4 ರಲ್ಲಿ ಡ್ರಾ ಸಾಧಿಸಿದೆ. ಇನ್ನು ಓವಲ್ ಮೈದಾನದ ದಾಖಲೆಯನ್ನು ನೋಡಿದರೆ, ಭಾರತ ತಂಡವು 13 ಟೆಸ್ಟ್ ಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದು, 5 ರಲ್ಲಿ ಸೋತಿದೆ. ಉಳಿದವುಗಳಲ್ಲಿ ಡ್ರಾ ಸಾಧಿಸಿದೆ.
ಇತರ ಮೂರು ಮೈದಾನಗಳಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಇಲ್ಲಿಯವರೆಗೆ ಒಂದೇ ಒಂದು ಟೆಸ್ಟ್ ಗೆದ್ದಿಲ್ಲ. ಹಾಗೆಯೇ ಬರ್ಮಿಂಗ್ಹ್ಯಾಮ್ ನಲ್ಲಿ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 6 ರಲ್ಲಿ ಸೋತಿದೆ. ಮ್ಯಾಂಚೆಸ್ಟರ್‌ನಲ್ಲಿ ಆಡಲಾದ 9 ಪಂದ್ಯಗಳಲ್ಲಿ 4 ಭಾರತ ಸೋತಿದ್ದರೆ, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಸೌತಾಂಪ್ಟನ್ನಲ್ಲಿ ಭಾರತ-ಇಂಗ್ಲೆಂಡ್ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಮ್ ಇಂಡಿಯಾ ಮೂರು ಬಾರಿ ಕೂಡ ಸೋತಿದೆ. ಅಂದರೆ ಇಂಗ್ಲೆಂಡ್ನ ಯಾವುದೇ ಮೈದಾನದಲ್ಲಿ ಟೀಮ್ ಇಂಡಿಯಾ ಟೆಸ್ಟ್ನಲ್ಲಿ 2ಕ್ಕಿಂತ ಹೆಚ್ಚು ಬಾರಿ ಗೆಲುವು ಸಾಧಿಸಿಲ್ಲ. ಹೀಗಾಗಿ ಮೊದಲ ಪಂದ್ಯವನ್ನು ಭಾರತ ಗೆದ್ದರೆ 89 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ನ ಒಂದೇ ಪಿಚ್ನಲ್ಲಿ ಮೂರು ಟೆಸ್ಟ್ ಪಂದ್ಯ ಗೆದ್ದ ಸಾಧನೆಯನ್ನು ಟೀಮ್ ಇಂಡಿಯಾ ಮಾಡಲಿದೆ.
ಇದೀಗ ಗೆಲುವಿನ ಸಮೀಪದಲ್ಲಿರುವ ಟೀಮ್ ಇಂಡಿಯಾಗೆ ವರುಣ ಅಡ್ಡಿಯಾಗಿದ್ದು, ಇದಾಗ್ಯೂ ಅಂತಿಮ ದಿನದಾಟದ 2ನೇ ಸೆಷನ್ ಆರಂಭವಾಗುವ ನಿರೀಕ್ಷೆಯಿದೆ. ಅಥವಾ ಮೂರನೇ ಹಾಗೂ ನಾಲ್ಕನೇ ಸೆಷನ್ನಲ್ಲಿ ಪಂದ್ಯ ಮುಂದುವರೆಸುವ ಅವಕಾಶ ದೊರೆತರೂ ವೇಗವಾಗಿ 157 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಹೊಸ ಇತಿಹಾಸ ಬರೆಯುವ ಅವಕಾಶವಂತು ಇದ್ದೇ ಇದೆ.
ಇದನ್ನೂ ಓದಿ: Jasprit Bumrah: ಜಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
ಇದನ್ನೂ ಓದಿ: IPL 2021: ಐಪಿಎಲ್ನ ಪ್ರಮುಖ ನಿಯಮ ಬದಲಿಸಿದ ಬಿಸಿಸಿಐ
ಇದನ್ನೂ ಓದಿ: IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್
Published On - 7:57 pm, Sun, 8 August 21