
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಬುಧವಾರದಿಂದ ಮ್ಯಾಂಚೆಸ್ಟರ್‌ನಲ್ಲಿ (Manchester Test) ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿದೆ. ಅದರಂತೆ ಮೊದಲ ದಿನದಂದು ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 264 ರನ್ ಕಲೆಹಾಕಿದೆ. ದಿನದಾಟದಂತ್ಯದ ವೇಳೆಗೆ, ರವೀಂದ್ರ ಜಡೇಜಾ 19 ರನ್ ಮತ್ತು ಶಾರ್ದೂಲ್ ಠಾಕೂರ್ 19 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಉಳಿದಂತೆ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರ ಆರಂಭಿಕ ಜೋಡಿ ಭಾರತಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿತು. ಆದರೆ ಎರಡನೇ ಸೆಷನ್‌ನಲ್ಲಿ ಕ್ರಿಸ್ ವೋಕ್ಸ್, ಕೆಎಲ್ ರಾಹುಲ್ ವಿಕೆಟ್ ಉರುಳಿಸಿ ಈ ಜೊತೆಯಾಟ ಮುರಿದರು. ರಾಹುಲ್ 98 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 46 ರನ್ ಗಳಿಸಿ ಔಟಾದರು. ಇದರ ನಂತರ, ಎಂಟು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಲಿಯಾಮ್ ಡಾಸನ್, ಯಶಸ್ವಿ ಜೈಸ್ವಾಲ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ಜೈಸ್ವಾಲ್ 107 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು.
ಎರಡನೇ ಸೆಷನ್‌ನಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಎಲ್ ಮತ್ತು ಯಶಸ್ವಿ ಹೊರತುಪಡಿಸಿ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಶುಭ್ಮನ್ ಗಿಲ್ ಕೂಡ ಔಟಾದರು. ಬೆನ್ ಸ್ಟೋಕ್ಸ್ ಅವರನ್ನು ಎಲ್‌ಬಿಡಬ್ಲ್ಯೂ ಆಗಿ ಔಟ್ ಮಾಡಿದರು. ಗಿಲ್ಗೆ ಕೇವಲ 12 ರನ್ ಗಳಿಸಲು ಸಾಧ್ಯವಾಯಿತು. ಮೂರನೇ ಸೆಷನ್‌ನಲ್ಲಿ, ರಿಷಭ್ ಪಂತ್ ಮತ್ತು ಸಾಯಿ ಸುದರ್ಶನ್ ಜವಾಬ್ದಾರಿ ವಹಿಸಿಕೊಂಡು 72 ರನ್ಗಳ ಜೊತೆಯಾಟವನ್ನಾಡಿದರು.
ಈ ವೇಳೆ ಪಂತ್ ಗಂಭೀರವಾಗಿ ಗಾಯಗೊಂಡಿದ್ದು ತಂಡಕ್ಕೆ ಆಘಾತ ನೀಡಿದೆ. ಪಂತ್ ತಮ್ಮ ಬಲಗಾಲಿಗೆ ಗಾಯ ಮಾಡಿಕೊಂಡಿದ್ದು ಅವರ ಕಾಲಿನಿಂದ ರಕ್ತ ಸುರಿದಿದೆ. ಹೀಗಾಗಿ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬಳಸಬೇಕಾಯಿತು. ಪಂತ್ ಗಾಯಗೊಳ್ಳುವ ಮೊದಲು 48 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಈ ವೇಳೆ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಬಾರಿಸಿದ್ದರು.
IND vs ENG: ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್! ಕಾಲಿನಿಂದ ಹರಿಯಿತು ರಕ್ತ; ವಿಡಿಯೋ ನೋಡಿ
ಜೈಸ್ವಾಲ್ ಜೊತೆಗೆ, ಸಾಯಿ ಸುದರ್ಶನ್ ಮೊದಲ ದಿನದಂದು ಅರ್ಧಶತಕ ಗಳಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವಾಗಿತ್ತು. ಆದರೆ ಅರ್ಧಶತಕದಬೆನ್ನಲ್ಲೇ ಸುದರ್ಶನ್, ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಸುದರ್ಶನ್ 151 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 61 ರನ್ ಗಳಿಸಿದರು. ಪ್ರಸ್ತುತ, ರವೀಂದ್ರ ಜಡೇಜಾ 37 ಎಸೆತಗಳಲ್ಲಿ 19 ರನ್ ಮತ್ತು ಶಾರ್ದೂಲ್ ಠಾಕೂರ್ 36 ಎಸೆತಗಳಲ್ಲಿ 19 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಮಂದ ಬೆಳಕಿನಿಂದಾಗಿ ಮೊದಲ ದಿನದ ಆಟ ಬೇಗನೆ ಕೊನೆಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ