India vs England 5th Test: ಇಂಗ್ಲೆಂಡ್​ಗೆ ಭರ್ಜರಿ ಜಯ: ಕಮರಿದ ಸರಣಿ ಗೆಲ್ಲುವ ಟೀಮ್ ಇಂಡಿಯಾ ಕನಸು

| Updated By: ಝಾಹಿರ್ ಯೂಸುಫ್

Updated on: Jul 05, 2022 | 4:31 PM

India vs England 5th Test: ಈ ಸರಣಿಯು ಕಳೆದ ವರ್ಷ ನಡೆದ ಭಾರತ-ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಪಂದ್ಯವಾಗಿದೆ. ಅಂದರೆ 5 ಪಂದ್ಯಗಳ ಸರಣಿಯ ಮೊದಲ 4 ಪಂದ್ಯಗಳು ಈಗಾಗಲೇ ಮುಗಿದಿದೆ.

India vs England 5th Test: ಇಂಗ್ಲೆಂಡ್​ಗೆ ಭರ್ಜರಿ ಜಯ: ಕಮರಿದ ಸರಣಿ ಗೆಲ್ಲುವ ಟೀಮ್ ಇಂಡಿಯಾ ಕನಸು
India vs England 5th Test
Follow us on

India vs England 5th Test: ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಮೈದಾನದಲ್ಲಿ ನಡೆದ ಭಾರತದ (England vs India) ವಿರುದ್ದ 5ನೇ ಟೆಸ್ಟ್​​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಟೀಮ್ ಇಂಡಿಯಾ ನೀಡಿ 378 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತುವ ಮೂಲಕ ಇಂಗ್ಲೆಂಡ್ ಹೊಸ ಇತಿಹಾಸ ನಿರ್ಮಿಸಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡವು 2ನೇ ಇನಿಂಗ್ಸ್​ನಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಚೇಸ್ ಮಾಡಿರಲಿಲ್ಲ. ಇದೀಗ 378 ರನ್​ಗಳನ್ನು ಬೆನ್ನತ್ತುವ ಮೂಲಕ ಬೆನ್​ ಸ್ಟೋಕ್ಸ್ ಪಡೆ ಐತಿಹಾಸಿಕ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ರಿಷಭ್ ಪಂತ್ (146) ಹಾಗೂ ರವೀಂದ್ರ ಜಡೇಜಾ (104) ಅವರ ಶತಕದ ನೆರವಿನಿಂದ 416 ರನ್​ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರ ಜಾನಿ ಬೈರ್​ಸ್ಟೋವ್​ (106) ಮಾತ್ರ ಶತಕ ಬಾರಿಸಿದ್ದರು. ಈ ಭರ್ಜರಿ ಶತಕದ ಹೊರತಾಗಿಯೂ ಇಂಗ್ಲೆಂಡ್ ಕೇವಲ 284 ರನ್​ಗಳಿಗೆ ಆಲೌಟ್ ಆಗಿತ್ತು.

ಮೊದಲ ಇನಿಂಗ್ಸ್​ನಲ್ಲಿ 132 ರನ್​ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ 2ನೇ ಇನಿಂಗ್ಸ್​ನಲ್ಲಿ ಮುಗ್ಗರಿಸಿತು. ಪರಿಣಾಮ 4ನೇ ದಿನದಾಟದಲ್ಲಿ ಭಾರತ ತಂಡವು ಕೇವಲ 245 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 378 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡವು 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್​ ಕಲೆಹಾಕಿ ಗೆಲುವನ್ನು ಖಚಿತಪಡಿಸಿಕೊಂಡಿದ್ದರು.

ಅದರಂತೆ ಐದನೇ ದಿನದಾಟದಲ್ಲಿ 136 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಜೋ ರೂಟ್ ಬ್ಯಾಟ್ ಮೇಲೆಕ್ಕತ್ತಿದ್ದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ಜಾನಿ ಬೈರ್​ಸ್ಟೋವ್ ಕೂಡ 138 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಪರಿಣಾಮ ಕೊನೆಯ ದಿನದಾಟದ ಮೊದಲ ಸೆಷನ್​ನಲ್ಲೇ ಇಂಗ್ಲೆಂಡ್ ತಂಡವು 378 ರನ್​ಗಳ ಟಾರ್ಗೆಟ್ ಬೆನ್ನತ್ತಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಈ ಸರಣಿಯು ಸಮಬಲದಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಏಕೆಂದರೆ ಈ ಸರಣಿಯು ಕಳೆದ ವರ್ಷ ನಡೆದ ಭಾರತ-ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಪಂದ್ಯವಾಗಿದೆ. ಅಂದರೆ 5 ಪಂದ್ಯಗಳ ಸರಣಿಯ ಮೊದಲ 4 ಪಂದ್ಯಗಳು ಈಗಾಗಲೇ ಮುಗಿದಿದೆ. ಇನ್ನು ಐದನೇ ಪಂದ್ಯವನ್ನು ಕೊರೋನಾ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಐದನೇ ಟೆಸ್ಟ್ ಪಂದ್ಯವನ್ನು ಆಡಲಾಗಿತ್ತು.

ಅತ್ತ ಮೊದಲ 4 ಪಂದ್ಯಗಳಲ್ಲಿ ಟೀಮ್ ಇಂಡಿಯಾ 2 ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಅಂದರೆ ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯವು ಮಳೆಯ ಕಾರಣ ಡ್ರಾನಲ್ಲಿ ಅಂತ್ಯವಾಗಿತ್ತು. ಇದಾದ ಬಳಿಕ ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್​ಗಳ ಐತಿಹಾಸಿಕ ಗೆಲುವು ದಾಖಲಿಸಿತ್ತು.

ಇನ್ನು ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ತಂಡವು ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತು. ಓವಲ್​ ಮೈದಾನದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 157 ರನ್​ಗಳ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಹೊಂದಿತ್ತು. ಇದೀಗ 5ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿ ಇಂಗ್ಲೆಂಡ್ ತಂಡವು ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿದೆ.

ಇದರೊಂದಿಗೆ ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಟೀಮ್ ಇಂಡಿಯಾ 15 ವರ್ಷಗಳ ಕನಸು ಕೂಡ ಕಮರಿದೆ. ಭಾರತ ತಂಡವು ಕೊನೆಯ ಬಾರಿಗೆ ಇಂಗ್ಲೆಂಡ್​ನಲ್ಲಿ ಟೆಸ್ಟ್ ಸರಣಿ ಗೆದ್ದಿದ್ದು 2007 ರಲ್ಲಿ, ಇದಾದ ಬಳಿಕ ಆಂಗ್ಲರ ನೆಲದಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಈ ಬಾರಿ ಅಂತಹದೊಂದು ಭರವಸೆ ಮೂಡಿಸಿದರೂ, ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಡ್ರಾನೊಂದಿಗೆ ಅಂತ್ಯಗೊಳಿಸಿದೆ.