IND vs ENG: ಬಾಝ್ ಬೌಲ್ಡ್… ಕ್ಲೀನ್ ಬೌಲ್ಡ್
India vs England: ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಈ ಹಿಂದೆಯೂ ಸರಣಿ ಜಯಿಸಿತ್ತು. ಆದರೆ ಈ ಬಾರಿ ಗೆದ್ದಿರುವುದು ಅನಾನುಭವಿ ಪಡೆಗಳೊಂದಿಗೆ ಎಂಬುದು ವಿಶೇಷ. ಅಂದರೆ ಈ ಬಾರಿಯ ಸರಣಿಯ ಮೂಲಕ ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಆಕಾದೀಪ್, ಧ್ರುವ್ ಜುರೇಲ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಹೊಸ ಆಟಗಾರರನ್ನು ಒಳಗೊಂಡ ತಂಡವನ್ನು ಮುನ್ನಡೆಸಿ ರೋಹಿತ್ ಶರ್ಮಾ ಭಾರತ ತಂಡಕ್ಕೆ ಸರಣಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನೋ ವಿರಾಟ್ ಕೊಹ್ಲಿ, ನೋ ಮೊಹಮ್ಮದ್ ಶಮಿ, ನೋ ಚೇತೇಶ್ವರ ಪೂಜಾರ… ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಕಣಕ್ಕಿಳಿದಾಗ ಪ್ರಮುಖ ಆಟಗಾರರ ಅನುಪಸ್ಥಿತಿ ಎದ್ದು ಕಾಣಿಸಿತು. ಪರಿಣಾಮ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 28 ರನ್ಗಳಿಂದ ಬಗ್ಗು ಬಡಿದು ಇಂಗ್ಲೆಂಡ್ ಶುಭಾರಂಭ ಮಾಡಿತು. ಈ ಮೂಲಕ ಭಾರತದಲ್ಲೂ ಬಾಝ್ಬಾಲ್ ಮುಂದುವರೆಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಇಂಗ್ಲೆಂಡ್ ತಂಡ ರವಾನಿಸಿತು.
ಇದೇ ಕಾರಣದಿಂದಾಗಿ ಬಾಝ್ಬಾಲ್ ಪ್ರತಿತಂತ್ರ ಹೆಣೆಯಬೇಕಾದ ಅನಿವಾರ್ಯತೆಯನ್ನು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಒತ್ತಿ ಹೇಳಿದ್ದರು. ಆದರೆ 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅಲಭ್ಯರಾದರು. ಮೊದಲ ಸೋಲಿನ ಬೆನ್ನಲ್ಲೇ ಪ್ರಮುಖ ಆಟಗಾರರ ಅನುಪಸ್ಥಿತಿ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿತು.
ಇಡೀ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ರೋಹಿತ್ ಶರ್ಮಾ ಯುವ ಪಡೆಯನ್ನು ಮುನ್ನಡೆಸಿದರು. 2ನೇ ಟೆಸ್ಟ್ ಪಂದ್ಯದಲ್ಲಿ ಅನಾನುಭವಿ ಯಶಸ್ವಿ ಜೈಸ್ವಾಲ್ ದ್ವಿಶತಕ ಸಿಡಿಸಿದರು. 3ನೇ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಅವರ ಬ್ಯಾಟ್ನಿಂದ ಶತಕ ಮೂಡಿಬಂತು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದ ಭಾರತ ತಂಡವು ಎಲ್ಲಾ ಹಂತಗಳಲ್ಲೂ ಇಂಗ್ಲೆಂಡ್ ತಂಡಕ್ಕೆ ಸರಿಸಾಟಿಯಾಗಿ ನಿಂತರು.
ಯುವ ಬ್ಯಾಟರ್ಗಳ ಈ ಪ್ರದರ್ಶನಗಳ ಜೊತೆಗೆ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಅನುಭವ ಧಾರೆಯೆರೆದರು. ಈ ಮೂಲಕ 9 ವಿಕೆಟ್ ಕಬಳಿಸಿ ಆಂಗ್ಲರಿಗೆ ಆಘಾತ ನೀಡಿದರು. ಪರಿಣಾಮ ಫಲಿತಾಂಶ ಟೀಮ್ ಇಂಡಿಯಾ ಪರ ವಾಲಿತು. ಈ ಮೂಲಕ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 106 ರನ್ಗಳ ಭರ್ಜರಿ ಜಯ ಸಾಧಿಸಿತು.
ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ರವೀಂದ್ರ ಜಡೇಜಾ ಭಾರತ ತಂಡವನ್ನು ಕೂಡಿಕೊಂಡರು. ಇತ್ತ ಕೆಎಲ್ ರಾಹುಲ್ ಬದಲಿಗೆ ಸರ್ಫರಾಝ್ ಖಾನ್ ಭಾರತದ ಬಳಗಕ್ಕೆ ಎಂಟ್ರಿಕೊಟ್ಟರು. ನಿರೀಕ್ಷೆಯಂತೆ ರಾಜ್ಕೋಟ್ನಲ್ಲೂ ಭಾರತೀಯರು ಪರಾಕ್ರಮ ಮೆರೆದರು. ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದರೆ, ರವೀಂದ್ರ ಜಡೇಜಾ ಶತಕ ಸಿಡಿಸಿದರು.
ಇನ್ನು ಸರ್ಫರಾಝ್ ಖಾನ್ ಚೊಚ್ಚಲ ಪಂದ್ಯದಲ್ಲೇ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದರು. ಬೌಲಿಂಗ್ನಲ್ಲಿ ಸಿರಾಜ್ 4 ವಿಕೆಟ್ ಕಬಳಿಸಿದರೆ, ಜಡೇಜಾ 7 ವಿಕೆಟ್ ಉರುಳಿಸಿ ರಾಜ್ಕೋಟ್ನ ರಾಜನಾಗಿ ಮೆರೆದರು. ಈ ಸಾಂಘಿಕ ಪ್ರದರ್ಶನದೊಂದಿಗೆ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 434 ರನ್ಗಳಿಂದ ಬಗ್ಗು ಬಡಿಯಿತು.
ಸರಣಿಯಲ್ಲಿ 2-1 ಅಂತರದಿಂದ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದ್ದರಿಂದ ಇಂಗ್ಲೆಂಡ್ ಪಾಲಿಗೆ ನಾಲ್ಕನೇ ಟೆಸ್ಟ್ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿತ್ತು. ಆದರೆ ಈ ಬಾರಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಆದರೆ ಈ ಕೊರತೆಯನ್ನು ಮರೆಮಾಚುವಂತೆ ಯುವ ಆಟಗಾರರು ಟೀಮ್ ಇಂಡಿಯಾ ಪರ ಪ್ರದರ್ಶನ ನೀಡಿದರು. ಪರಿಣಾಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಇಂಗ್ಲೆಂಡ್ ತಂಡದ ಬಾಝ್ ಬಾಲ್ ಬೌಲ್ಡ್ ಆಗಿದೆ.
ಇದನ್ನೂ ಓದಿ: Yashasvi Jaiswal: ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯನ್ನು ಸರಿಗಟ್ಟಿದ ಯಶಸ್ವಿ ಜೈಸ್ವಾಲ್
ಬಾಝ್ ಬೌಲ್ಡ್… ಕ್ಲೀನ್ ಬೌಲ್ಡ್:
ಹೌದು, ಬಾಯ್ಬಾಝ್ ಹೈಪ್ನೊಂದಿಗೆ ಭಾರತಕ್ಕೆ ಆಗಮಿಸಿದ ಇಂಗ್ಲೆಂಡ್ ತಂಡ ಇದೀಗ ಸರಣಿ ಸೋತಿದೆ. ಇದರೊಂದಿಗೆ ಬಾಝ್ಬೌಲ್ಡ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾಲಾಗಿದೆ. ಏಕೆಂದರೆ ಭಾರತಕ್ಕೆ ಬರುವ ಮುನ್ನ ಇಂಗ್ಲೆಂಡ್ ಬಾಝ್ಬಾಲ್ ರಣರಂತ್ರದೊಂದಿಗೆ 7 ಟೆಸ್ಟ್ ಸರಣಿಗಳನ್ನು ಆಡಿತ್ತು. ಈ ವೇಳೆ 4 ಸರಣಿಗಳಲ್ಲಿ ಜಯ ಸಾಧಿಸಿದರೆ, 3 ಸರಣಿಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿತ್ತು. ಆದರೆ ಒಮ್ಮೆಯೂ ಸೋತಿರಲಿಲ್ಲ.
ಹೀಗಾಗಿಯೇ ಬಾಝ್ಬಾಲ್ ಭಾರತ ತಂಡಕ್ಕೂ ಸೋಲಿನ ರುಚಿ ತೋರಿಸಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಟೀಮ್ ಇಂಡಿಯಾದ ಸಾಂಘಿಕ ಪ್ರದರ್ಶನದ ಮುಂದೆ ಆಂಗ್ಲರು ಮಂಕಾಗಿದ್ದಾರೆ. ಬಾಝ್ಬೌಲ್ಡ್ ಆಗಿದೆ… ಕ್ಲೀನ್ ಬೌಲ್ಡ್ ಆಗಿದೆ.
Published On - 2:30 pm, Mon, 26 February 24