
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾ (Team India) ಮೇಲುಗೈ ಸಾಧಿಸಿದೆ. ಇದೀಗ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ಕೊನೆಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳು ಬೇಕಾಗಿದ್ದರೆ, ಇಂಗ್ಲೆಂಡ್ ಗೆಲುವಿಗೆ ಇನ್ನೂ 536 ರನ್ ಬೇಕಾಗಿದೆ. ಆದಾಗ್ಯೂ ಕೊನೆಯ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದೆ. ಅಂದರೆ ಭಾರತದ ಗೆಲುವಿಗೆ ಅಡ್ಡಿಯಾಗಿರುವ ಮಳೆರಾಯ ನಿಗದಿತ ಸಮಯಕ್ಕೆ ಸರಿಯಾಗಿ ಪಂದ್ಯವನ್ನು ಆರಂಭಿಸಲು ಬಿಟ್ಟಿಲ್ಲ. ಈ ಮೊದಲೇ ವರದಿಯಾದ್ದಂತೆ ಬರ್ಮಿಂಗ್ಹ್ಯಾಮ್ ಟೆಸ್ಟ್‌ನ ಕೊನೆಯ ದಿನದಂದು ಮಳೆ ಸುರಿಯಲಾರಂಭಿಸಿದ್ದು, ಆಟಕ್ಕೆ ಅಡಚಣೆಯುಂಟಾಗಿದೆ.
ಎಡ್ಜ್‌ಬಾಸ್ಟನ್ ಟೆಸ್ಟ್‌ನ 5 ನೇ ದಿನದ ಹವಾಮಾನದ ಬಗ್ಗೆ ಮಾತನಾಡಿದರೆ, ಅಕ್ಯೂವೆದರ್ ವರದಿಯ ಪ್ರಕಾರ, ಬೆಳಿಗ್ಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ, ಸ್ಥಳೀಯ ಸಮಯದಂತೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆ ಶೇ. 79 ರಷ್ಟು ಇದೆ. ಐದನೇ ದಿನದ ಆಟ ಸ್ಥಳೀಯ ಸಮಯದಂತೆ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಹೀಗಿರುವಾಗ ಮಧ್ಯಾಹ್ನ 1 ಗಂಟೆಯ ವೇಳೆಗೆ ಪುನಃ ಮಳೆಯಾಗುವ ಸಾಧ್ಯತೆ ಇದ್ದು, ಇದು ಶೇ. 22 ಕ್ಕೆ ಇಳಿಯಲಿದೆ.
ಹೀಗಾಗಿ ಬರ್ಮಿಂಗ್ಹ್ಯಾಮ್ನಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿದ್ದು, ಮೊದಲ ಸೆಷನ್‌ನ ಆಟದ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಆಟ ನಿಗದಿತ ಸಮಯದಲ್ಲಿ ಪ್ರಾರಂಭವಾಗಿಲ್ಲ. ಇದರಿಂದ ಇಂಗ್ಲೆಂಡ್ ತಂಡಕ್ಕೆ ಪ್ರಯೋಜನವಾಗಿದ್ದು, ಆತಿಥೇಯ ಆಂಗ್ಲರಿಗೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನೆರವಾಗಿದೆ.
IND vs ENG: ಸಿಕ್ಸರ್‌ಗಳ ಸರಮಾಲೆ; ಇಂಗ್ಲೆಂಡ್ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ರಿಷಭ್ ಪಂತ್
ಭಾರತ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ ನಷ್ಟಕ್ಕೆ 427 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಆತಿಥೇಯರಿಗೆ 608 ರನ್ಗಳ ಗುರಿ ನೀಡಿದೆ. ಈ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಭಾರತದ ವೇಗಿಗಳ ಮುಂದೆ ಮಂಡಿಯೂರಿದ್ದು ಈಗಾಗಲೇ ಮೂರು ವಿಕೆಟ್ಗಳನ್ನು ಕಳೆದುಕೊಂಡಿದೆ. ಆರಂಭಿಕ ಜ್ಯಾಕ್ ಕ್ರೌಲಿ, ಬೆನ್ ಡಕೆಟ್ ಮತ್ತು ಜೋ ರೂಟ್ ಪೆವಿಲಿಯನ್ ಸೇರಿಕೊಂಡಿದ್ದಾರೆ. ದಿನದಾಟದ ಅಂತ್ಯದ ವೇಳೆಗೆ, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳಿಗೆ 72 ರನ್ ಗಳಿಸಿದ್ದು ಇನ್ನೂ 536 ರನ್ ಗಳಿಸಬೇಕಾಗಿದೆ. ಓಲಿ ಪೋಪ್ 24 ರನ್ ಮತ್ತು ಹ್ಯಾರಿ ಬ್ರೂಕ್ 15 ರನ್ ಬಾರಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ಪರ ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Sun, 6 July 25