ತನ್ನ ದಾಖಲೆ ಮುರಿದ ಗಿಲ್ಗೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ
Virat Kohli - Shubman Gill: ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಶುಭ್ಮನ್ ಗಿಲ್ ಶುಭಾರಂಭ ಮಾಡಿದ್ದಾರೆ. ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪ0ಂದ್ಯದಲ್ಲಿ 155 ರನ್ ಬಾರಿಸಿದ್ದ ಗಿಲ್ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕದೊಂದಿಗೆ ಅಬ್ಬರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಎರಡು ಭರ್ಜರಿ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.

ಭಾರತ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಿಂಗ್ ಕೊಹ್ಲಿಯ ನಿವೃತ್ತಿಯಿಂದಾಗಿ ತೆರವಾಗಿದ್ದ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶುಭ್ಮನ್ ಗಿಲ್ ಶುಭಾರಂಭ ಮಾಡಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಗಳನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಇತ್ತ ಭಾರತೀಯ ನಾಯಕನ ಈ ಅದ್ಭುತ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ಮೂರನೇ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಶುಭ್ಮನ್ ಗಿಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಅವರ ಈ ಭರ್ಜರಿ ಬ್ಯಾಟಿಂಗ್ಗೆ ಮೆಚ್ಚುಗೆ ಸೂಚಿಸಿರುವ ಕೊಹ್ಲಿ, ನೀವು ಇತಿಹಾಸವನ್ನು ಪುನರಚಿಸುತ್ತೀರಿ ಎಂದು ಕೊಂಡಾಡಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಶುಭ್ಮನ್ ಗಿಲ್ 269 ರನ್ಗಳ ಭರ್ಜರಿ ದ್ವಿಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 162 ಎಸೆತಗಳಲ್ಲಿ 161 ರನ್ ಬಾರಿಸಿದ ಗಿಲ್, ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು. ಈ ಭರ್ಜರಿ ದಾಖಲೆ ಬರೆಯುತ್ತಿದ್ದಂತೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ ರವಾನಿಸಿದ್ದಾರೆ.
ಸೋಷಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ವಿರಾಟ್ ಕೊಹ್ಲಿ, ಗಿಲ್ ಅವರ ಫೋಟೋವನ್ನು ಹಾಕಿ “ಚೆನ್ನಾಗಿ ಆಡಿದ್ದೀಯ ಸ್ಟಾರ್ ಬಾಯ್. ನೀವು ಇತಿಹಾಸವನ್ನು ಪುನಃ ಬರೆಯುತ್ತೀರಿ. ಇಲ್ಲಿಂದ ಮುಂದುವರಿಯಿರಿ ಮತ್ತು ಮತ್ತಷ್ಟು ಏತ್ತರಕ್ಕೇರಿ..ಇದಕ್ಕೆಲ್ಲ ನೀವು ಅರ್ಹರು.” ಎಂದು ಅಭಿನಂದನಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಿಂಗ್ ದಾಖಲೆ ಮುರಿದ ಪ್ರಿನ್ಸ್:
ವಿರಾಟ್ ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವವನ್ನು ಪ್ರಾರಂಭಿಸಿದ್ದರು. ಈ ವೇಳೆ ಮೊದಲ ಎರಡು ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದರು. ಕೊಹ್ಲಿಯಂತೆಯೇ, ಇದೀಗ ಸುಮಾರು 11 ವರ್ಷಗಳ ನಂತರ ಯುವ ನಾಯಕನಾಗಿ ಭಾರತದ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ಗಿಲ್, ಮೊದಲ 2 ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: ಕೇವಲ 27 ರನ್ ಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಗಿಲ್
ಅಲ್ಲದೆ ನಾಯಕನಾಗಿ ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳಲ್ಲಿ ಕಲೆಹಾಕಿದ್ದ 449 ರನ್ ಗಳ ದಾಖಲೆಯನ್ನು ಶುಭ್ಮನ್ ಗಿಲ್ ಮುರಿದಿದ್ದಾರೆ. ನಾಯಕನಾಗಿ ಆಡಿದ ಮೊದಲೆರಡು ಪಂದ್ಯಗಳಿಂದ ಶುಭ್ಮನ್ ಗಿಲ್ ಬರೋಬ್ಬರಿ 585 ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಭರ್ಜರಿ ದಾಖಲೆ ಮುರಿದಿದ್ದಾರೆ.
Published On - 1:48 pm, Sun, 6 July 25