India Under 19: ಕಳೆದ ಏಳು ಫೈನಲ್​ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು?: ಇಲ್ಲಿದೆ ಸಂಪೂರ್ಣ ವಿವರ

ಅಂಡರ್-19 ವಿಶ್ವಕಪ್​ನಲ್ಲಿ ಭಾರತದ ಇತಿಹಾಸ ಗಮನಿಸುವುದಾದರೆ ಭಾರತದ್ದೇ ಮೇಲುಗೈ. ಈ ಪೈಕಿ ಕಳೆದ ಏಳು ಫೈನಲ್​​ನಲ್ಲಿ ಭಾರತ ಯಾವರೀತಿ ಪ್ರದರ್ಶನ ನೀಡಿದೆ ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

India Under 19: ಕಳೆದ ಏಳು ಫೈನಲ್​ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು?: ಇಲ್ಲಿದೆ ಸಂಪೂರ್ಣ ವಿವರ
India Under 19 Team
TV9kannada Web Team

| Edited By: Vinay Bhat

Feb 05, 2022 | 1:13 PM

ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ (ICC U-19 World Cup) ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ ಇಂದು 5ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳಲು ಸಜ್ಜಾಗಿ ನಿಂತಿದೆ. ಈವರೆಗೆ ನಡೆದಿರುವ 14 ಆವೃತ್ತಿಗಳಲ್ಲಿ 8 ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆದಿರುವ ಭಾರತದ ಕಿರಿಯರು ಈ ಬಾರಿ ದೇಶಕ್ಕೆ ಮತ್ತೊಂದು ಕಪ್ ಗೆಲ್ಲಿಸಿಕೊಡುವ ನಿರೀಕ್ಷೆಯಲ್ಲಿದ್ದಾರೆ. ಕೆರಿಬಿಯನ್‌ ದ್ವೀಪದ ನಾರ್ತ್‌ ಸೌಂಡ್‌ನ‌ ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಅಂಡರ್-19 (England U19 vs India U19) ತಂಡಗಳ ನಡುವೆ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಸಾಗಿ ಬಂದ ಹಾದಿಯನ್ನು ಗಮನಿಸುವಾಗ ಭಾರತದ ಗೆಲುವು ಹೆಚ್ಚು ಪರಿಪೂರ್ಣ ಹಾಗೂ ಅಧಿಕಾರಯುತ ಎನ್ನಲಡ್ಡಿಯಿಲ್ಲ. ನಾಯಕ ಯಶ್ ಧುಲ್‌ (Yash Dhull) ಹಾಗೂ ಉಪನಾಯಕ ಶೇಖ್ ರಶೀದ್‌ ಸೇರಿದಂತೆ ತಂಡದ ಬಹುತೇಕ ಎಲ್ಲ ಆಟಗಾರರು ಭರ್ಜರಿ ಫಾರ್ಮ್​ನಲ್ಲಿದ್ದು ಪ್ರಶಸ್ತಿಗೆ ಮುತ್ತಿಡುವ ನೆಚ್ಚಿನ ತಂಡವಾಗಿದೆ. ಅಂಡರ್-19 ವಿಶ್ವಕಪ್​ನಲ್ಲಿ ಭಾರತದ ಇತಿಹಾಸ ಗಮನಿಸುವುದಾದರೆ ಭಾರತದ್ದೇ ಮೇಲುಗೈ. ಈ ಪೈಕಿ ಕಳೆದ ಏಳು ಫೈನಲ್​​ನಲ್ಲಿ ಭಾರತ ಯಾವರೀತಿ ಪ್ರದರ್ಶನ ನೀಡಿದೆ ಎಂಬ ಬಗೆಗಿನ ವಿವರ ಇಲ್ಲಿದೆ ನೋಡಿ.

2000 ಅಂಡರ್-19 ವಿಶ್ವಕಪ್ ಫೈನಲ್: ಶ್ರೀಲಂಕಾ ವಿರುದ್ಧ 6 ವಿಕೆಟ್​ಗಳ ಜಯ

ಈ ಪಂದ್ಯದಲ್ಲಿ ಶ್ರೀಲಂಕಾ ಕೇವಲ 178 ರನ್​ಗಳನ್ನಷ್ಟೆ ಕಲೆಹಾಕಿತ್ತು. ಶಲಭ್ ಶ್ರೀವತ್ಸವ್ 33 ರನ್​ಗೆ 3 ವಿಕೆಟ್ ಕಿತ್ತಿದ್ದರು. ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ 40.4 ಓವರ್​ನಲ್ಲಿ ಗುರಿ ಮುಟ್ಟಿತ್ತು. ನಾಯಕ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ತಂಡದ ಪ್ರಮುಖ ಆಟಗಾರರಾಗಿದ್ದರು. ಇದು ಭಾರತ ಗೆದ್ದ ಮೊದಲ ಅಂಡರ್-19 ವಿಶ್ವಕಪ್ ಟ್ರೋಫಿ ಆಗಿತ್ತು.

2006 ಅಂಡರ್-19 ವಿಶ್ವಕಪ್ ಫೈನಲ್: ಪಾಕ್ ವಿರುದ್ಧ 38 ರನ್​ಗಳ ಸೋಲು

ಇದೊಂದು ರೋಚಕ ಪಂದ್ಯ. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ ಸೇರಿದಂತೆ ಬಲಿಷ್ಠವಾಗಿತ್ತು ಭಾರತ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಡ್ಡು ಹಾಗೂ ಚಾವ್ಲಾ ಅವರ ಸ್ಪಿನ್ ಜಾದುವಿಗೆ  ಸರ್ಫರಾಜ್ ಅಹ್ಮದ್ ಪಡೆ 109 ರನ್​ಗೆ ಸರ್ವಪತನ ಕಂಡಿತು. ಸುಲಭ ಟಾರ್ಗೆಟ್ ಬೆನ್ನಟ್ಟುವಲ್ಲಿ ಭಾರತ ವಿಫಲವಾಯಿತು. ಅನ್ವರ್ ಅಲಿ (35 ರನ್​ಗೆ 5 ವಿಕೆಟ್) ಬೌಲಿಂಗ್ ದಾಳಿಗೆ ಭಾರತ 18.5 ಓವರ್​ನಲ್ಲಿ 71 ರನ್​ಗೆ ಆಲೌಟ್ ಆಯಿತು.

2008 ಅಂಡರ್-19 ವಿಶ್ವಕಪ್ ಫೈನಲ್: ದ. ಆಫ್ರಿಕಾ ವಿರುದ್ಧ 12 ರನ್​ಗಳ ಜಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​​ ಪಂದ್ಯದಲ್ಲಿ ಕಲೆಹಾಕಿದ್ದು 159 ರನ್. ತನ್ಮಯ್ ಶ್ರೀವತ್ಸವ್ 74 ಎಸೆತಗಳಲ್ಲಿ 49 ರನ್ ಕಾಣಿಕೆ ನೀಡಿದ್ದರು. ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ 11 ರನ್ ಆಗುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿತು. ಜೊತೆಗೆ ಮಳೆ ಸುರಿಯಲು ಪ್ರಾರಂಭಿಸಿತು. ಬಳಿಕ ಡಕ್ವರ್ತ್ ಲುಯೀಸ್ ನಿಯಮದ ಅನ್ವಯ ಆಫ್ರಿಕಾಕಕ್ಕೆ ಗೆಲ್ಲಲು 98 ಎಸೆತಗಳಲ್ಲಿ 99 ರನ್ ನೀಡಲಾಯಿತು. ಇದರಲ್ಲಿ ಅಂತಿಮವಾಗಿ ಭಾರತ 12 ರನ್​ಗಳ ಜಯ ಸಾಧಿಸಿ ಎರಡನೇ ಬಾರಿ ಅಂಡರ್-19 ವಿಶ್ವಕಪ್ ಟ್ರೋಫಿ ಗೆದ್ದಿತು.

2012 ಅಂಡರ್-19 ವಿಶ್ವಕಪ್ ಫೈನಲ್: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಜಯ

ಉನ್ಮುಕ್ತ್ ಚಂದ್ ನೇತೃತ್ವದ ಭಾರತ ತಂಡಕ್ಕೆ ಫೈನಲ್​ನಲ್ಲಿ ಆಸ್ಟ್ರೇಲಿಯಾ 226 ರನ್​ಗಳ ಸವಾಲಿನ ಟಾರ್ಗೆಟ್ ನೀಡಿತು. ಇಲ್ಲಿ ಭಾರತಕ್ಕೆ ಏಕಾಂಗಿಯಾಗಿ ನಿಂತು ಗೆಲುವು ತಂದುಕೊಟ್ಟಿದ್ದು ನಾಯಕ ಚಂದ್, ದಾಖಲೆಯ ಅಜೇಯ ಶತಕದ (111) ನೆರವಿನಿಂದ ಭಾರತ 14 ಬಾಲ್ ಬಾಕಿಯಿರುವಂತೆಯೆ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟಿತು.

2016 ಅಂಡರ್-19 ವಿಶ್ವಕಪ್ ಫೈನಲ್: ವಿಂಡೀಸ್ ವಿರುದ್ಧ 5 ವಿಕೆಟ್​ಗಳ ಸೋಲು

ಈ ಪಂದ್ಯ ಸಂಪೂರ್ಣ ವೆಸ್ಟ್ ಇಂಡೀಸ್ ಕಡೆಗೇ ವಾಲಿತ್ತು. ಭಾರತ ಪರ ಸರ್ಫರಾಜ್ ಖಾನ್ 89 ಎಸೆತಗಳಲ್ಲಿ 51 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. 146 ರನ್​ಗಳ ಟಾರ್ಗೆಟ್ ಅನ್ನು ವಿಂಡೀಸ್ ಸುಲಭವಾಗಿ ತಲುಪಿ ಗೆಲುವು ಸಾಧಿಸಿತು.

2018 ಅಂಡರ್-19 ವಿಶ್ವಕಪ್ ಫೈನಲ್: ಆಸೀಸ್ ವಿರುದ್ಧ 8 ವಿಕೆಟ್​ಗಳ ಜಯ

ನ್ಯೂಜಿಲೆಂಡ್​ನಲ್ಲಿ ನಡೆದ ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಅಂಡರ್ 19 ತಂಡವನ್ನು ಪೃಥ್ವಿ ಶಾ ನಾಯಕನಾಗಿ ಮುನ್ನಡೆಸಿದ್ದರು. ಆಸ್ಟ್ರೇಲಿಯಾ ಭಾರತಕ್ಕೆ 217 ರನ್​ಗಳ ಟಾರ್ಗೆಟ್ ನೀಡಿತ್ತು. ಮನೋಜ್ ಕಲ್ರಾ ಅವರ ಅಜೇಯ 101 ಮತ್ತು ಹಾರ್ವಿಕ್ ದೇಸಾಯ್ ಅವರ 47 ರನ್​ಗಳ ನೆರವಿನಿಂದ ಭಾರತ 38.5 ಓವರ್​ನಲ್ಲಿ ಗೆದ್ದು ಕಪ್ ಗೆದ್ದಿತ್ತು.

2020 ಅಂಡರ್-19 ವಿಶ್ವಕಪ್ ಫೈನಲ್: ಬಾಂಗ್ಲಾ ವಿರುದ್ಧ 3 ವಿಕೆಟ್​ಗಳ ಸೋಲು

ಈ ಪಂದ್ಯದಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಬಾಂಗ್ಲಾದೇಶ ಗೆಲ್ಲಲು 15 ರನ್‍ಗಳ ಅಗತ್ಯವಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಡಕ್‍ವರ್ತ್ ಲೂಯೀಸ್ ಅನ್ವಯ ಬಾಂಗ್ಲಾದೇಶ 3 ವಿಕೆಟ್‍ಗಳ ಅಂತರದಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 47.2 ಓವರ್‍ಗಳಲ್ಲಿ 177 ರನ್‍ಗಳಿಗೆ ಆಲೌಟ್ ಆಯಿತು. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 88 ರನ್ ಗಳಿಸಿ ಅಬ್ಬರಿಸಿದ್ದರು.

ಅಭ್ಯಾಸಕ್ಕಾಗಿ 50Km ಪ್ರಯಾಣ, ಕನಸು ನನಸಾದಾಗ ಕೋವಿಡ್: ಭಾರತ ಫೈನಲ್​ಗೇರಲು ಇವರು ಪಟ್ಟ ಶ್ರಮಕ್ಕೆ ನಮ್ಮದೊಂದು ಸಲಾಂ

PKL 2022: ರಣ ರೋಚಕ ಟೈನಲ್ಲಿ ಅಂತ್ಯಕಂಡ ಬೆಂಗಳೂರು ಬುಲ್ಸ್-ದಬಾಂಗ್ ದಿಲ್ಲಿ ಕಬಡ್ಡಿ ಪಂದ್ಯ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada