India vs Hong Kong Asia Cup 2022: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ಆಗಸ್ಟ್ 31) ನಡೆಯಲಿರುವ ಏಷ್ಯಾಕಪ್ನ 4ನೇ ಪಂದ್ಯದಲ್ಲಿ ಭಾರತ ಹಾಗೂ ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗಲಿದೆ. ಈಗಾಗಲೇ ಪಾಕಿಸ್ತಾನ್ ತಂಡವನ್ನು ಸೋಲಿಸಿ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಪಂದ್ಯದಲ್ಲಿ ಗೆದ್ದರೆ ಸೂಪರ್-4 ಹಂತಕ್ಕೇರಲಿದೆ. ಇನ್ನು ಹಾಂಗ್ ಕಾಂಗ್ ತಂಡಕ್ಕೆ ಇದು ಮೊದಲ ಪಂದ್ಯವಾಗಿದ್ದು, ಹೀಗಾಗಿ ಬಲಿಷ್ಠ ಭಾರತ ತಂಡವನ್ನು ಸೋಲಿಸಿ ಶುಭಾರಂಭ ಮಾಡುವ ಇರಾದೆಯಲ್ಲಿದೆ.
ಇದಾಗ್ಯೂ ಹಾಂಗ್ ಕಾಂಗ್ ತಂಡವು ಟೀಮ್ ಇಂಡಿಯಾ ಪಾಲಿಗೆ ಸುಲಭ ತುತ್ತಾಗಬಹುದು. ಏಕೆಂದರೆ ಉಭಯ ತಂಡಗಳು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿದೆ. ಅದರಲ್ಲೂ ಬಲಿಷ್ಠ ಪಾಕ್ ತಂಡಕ್ಕೆ ಸೋಲುಣಿಸಿ ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಟೀಮ್ ಇಂಡಿಯಾವನ್ನು ಸೋಲಿಸಬೇಕಿದ್ದರೆ ಭರ್ಜರಿ ಪೈಪೋಟಿಯನ್ನಂತು ನೀಡಬೇಕು.
ಈ ಹಿಂದೊಮ್ಮೆ ಹಾಂಗ್ ಕಾಂಗ್ ತಂಡವು ಭಾರತದ ವಿರುದ್ದ ಇಂತಹದೊಂದು ಪೈಪೋಟಿ ನೀಡಿತ್ತು ಎಂಬುದು ವಿಶೇಷ. ಅಂದರೆ ಭಾರತ-ಹಾಂಗ್ ಕಾಂಗ್ ತಂಡಗಳು ಇದುವರೆಗೆ 2 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎರಡು ಬಾರಿ ಕೂಡ ಏಷ್ಯಾಕಪ್ ಟೂರ್ನಿಯಲ್ಲೇ ಆಡಿದ್ದು ವಿಶೇಷ.
2008 ರಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 374 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಹಾಂಗ್ ಕಾಂಗ್ ಕೇವಲ 118 ರನ್ಗಳಿಗೆ ಆಲೌಟ್ ಆಗಿದ್ದು ಈಗ ಇತಿಹಾಸ.
ಇದಾದ ಬಳಿಕ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗಿದ್ದು 2018 ರಲ್ಲಿ. ಅಂದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಹಾಂಗ್ ಕಾಂಗ್ ತಂಡವು ಒಂದು ಹಂತದಲ್ಲಿ ಟೀಮ್ ಇಂಡಿಯಾಗೆ ಸೋಲಿನ ಭೀತಿ ಹುಟ್ಟಿಸಿತ್ತು.
ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಹಾಂಗ್ ಕಾಂಗ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿದ್ದರು. ಅಂದು ಕೇವಲ 26 ರನ್ಗಳ ಅಂತರದಿಂದ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಟೀಮ್ ಇಂಡಿಯಾ ವಿರುದ್ದ 2018 ರಲ್ಲಿ ಹಾಂಗ್ ಕಾಂಗ್ ಪರ ಆಡಿದ್ದ ಬಹುತೇಕ ಆಟಗಾರರು ಈ ಬಾರಿ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಚುಟುಕು ಕ್ರಿಕೆಟ್ನಲ್ಲಿ ಹಾಂಗ್ ಕಾಂಗ್ ತಂಡದಿಂದ ಭರ್ಜರಿ ಪ್ರದರ್ಶನ ಮೂಡಿಬಂದರೂ ಅಚ್ಚರಿಪಡಬೇಕಿಲ್ಲ.
ಹಾಂಗ್ ಕಾಂಗ್ ತಂಡ ಹೀಗಿದೆ:
ಬಾಬರ್ ಹಯಾತ್ , ಮೊಹಮ್ಮದ್ ಘಜನ್ಫರ್ , ಕಿಂಚಿತ್ ಶಾ , ನಿಜಾಕತ್ ಖಾನ್ (ನಾಯಕ) , ಐಜಾಜ್ ಖಾನ್ , ಯಾಸಿಮ್ ಮುರ್ತಾಜಾ , ಜೀಶನ್ ಅಲಿ , ಸ್ಕಾಟ್ ಮೆಕ್ಕೆಚ್ನಿ , ಹರೂನ್ ಅರ್ಷದ್ , ಅಫ್ತಾಬ್ ಹುಸೇನ್ , ಎಹ್ಸಾನ್ ಖಾನ್ , ಧನಂಜಯ್ ರಾವ್ , ವಾಜಿದ್ ಶಾ , ಮೊಹಮ್ಮದ್ ವಹೀದ್, ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್, ಅಹಾನ್ ತ್ರಿವೇದಿ.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್. ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.