Ajinkya Rahane: ಮುಂದುವರೆದ ಅಜಿಂಕ್ಯಾ ರಹಾನೆ ಕಳಪೆ ಆಟ: ವಿವಿಎಸ್ ಲಕ್ಷ್ಮಣ್​ರಿಂದ ಮಹತ್ವದ ಹೇಳಿಕೆ

| Updated By: Vinay Bhat

Updated on: Nov 26, 2021 | 8:05 AM

VVS Laxman: ವಿವಿಎಸ್ ಲಕ್ಷ್ಮಣ್ ಹೇಳುವ ಪ್ರಕಾರ ಅಜಿಂಕ್ಯಾ ರಹಾನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಔಟ್ ಆಗಲು ಅವರ ಶಾಟ್ ಸೆಲೆಕ್ಷನ್ ಕಾರಣವಂತೆ.

Ajinkya Rahane: ಮುಂದುವರೆದ ಅಜಿಂಕ್ಯಾ ರಹಾನೆ ಕಳಪೆ ಆಟ: ವಿವಿಎಸ್ ಲಕ್ಷ್ಮಣ್​ರಿಂದ ಮಹತ್ವದ ಹೇಳಿಕೆ
Ajinkya Rahane and VVS Laxman
Follow us on

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಿಂದ ಭಾರತದ (India vs New Zealand 1st Test) ಖಾಯಂ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ ಅಜಿಂಕ್ಯಾ ರಹಾನೆ (Ajinkya Rahane) ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾಯಕತ್ವದ ಜವಾಬ್ದಾರಿ ಹೊತ್ತಮೇಲೆಯೂ ರಹಾನೆ ಕಳಪೆ ಆಟ ಮುಂದುವರೆದಿದೆ. ಕಾನ್ಪುರದ ಗ್ರೀನ್ ಪಾರ್ಕ್​ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್​ನ ಮೊದಲ ದಿನವೇ ರಹಾನೆ 63 ಎಸೆತಗಳಲ್ಲಿ ಕೇವಲ 35 ರನ್ ಗಳಿಸಿ ಕೈಲ್ ಜೆಮಿಸನ್ (Kyle Jamieson) ಬೌಲಿಂಗ್​ನಲ್ಲಿ ಬೌಲ್ಡ್ ಆಗುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು. ಇವರ ಪ್ರದರ್ಶನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಇದರ ಬಗ್ಗೆ ಕ್ರಿಕೆಟ್ ಪಂಡಿತರು ಕೂಡ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ (VVS Laxman) ರಹಾನೆ ಈರೀತಿ ಎಡವುತ್ತಿರುವುದಕ್ಕೆ ಮಹತ್ವದ ಕಾರಣ ನೀಡಿದ್ದಾರೆ.

ಲಕ್ಷ್ಮಣ್ ಹೇಳುವ ಪ್ರಕಾರ ರಹಾನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಔಟ್ ಆಗಲು ಅವರ ಶಾಟ್ ಸೆಲೆಕ್ಷನ್ ಕಾರಣವಂತೆ. “ಅಜಿಂಕ್ಯಾ ರಹಾನೆ ಕ್ರೀಸ್‌ಗೆ ಬಂದ ನಂತರ ಕೈಲ್ ಜೇಮಿಸನ್ ಶಾರ್ಟ್ ಪಿಚ್ ಎಸೆತಗಳನ್ನು ಹಾಕುತ್ತಿದ್ದರು. ಶಾರ್ಟ್ ಪಿಚ್ ಎಸೆತಗಳಿಗೆ ರಹಾನೆ ಬಳಿ ಇರುವ ಏಕೈಕ ಉತ್ತರವೆಂದರೆ ಪುಲ್‌ಶಾಟ್. ಆದರೆ ಇಂದು ಲೈನ್‌ನ ಆಚೆಗೆ ಹೋಗುವ ಎಸೆತವನ್ನು ಆಡಿ ಅವರು ವಿಕೆಟ್ ಕಳೆದುಕೊಂಡರು. ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾದಂತಾ ಸ್ಥಳಗಳಲ್ಲಿ ನೀವು ಲೈನ್‌ನ ಆಚೆಗಿನ ಎಸೆತವನ್ನು ಬಾರಿಸುವುದರಲ್ಲಿ ಅರ್ಥವಿದೆ. ಯಾಕೆಂದರೆ ಅಲ್ಲಿ ಹೆಚ್ಚು ಬೌನ್ಸ್ ಪಡೆಯುತ್ತದೆ. ಆಗ ನೀವು ಸ್ಕ್ವಾರ್ ಮೂಲಕ ಬಾರಿಸಬಹುದು. ಆದರೆ ಕಾನ್ಪುರದಲ್ಲಿ ಅಂತಾ ಹೊಡೆತಗಳನ್ನು ನೀವು ಬಾರಿಸಲು ಮುಂದಾಗುವುದು ಸರಿಯಲ್ಲ. ಯಾಕೆಂದರೆ ಅಲ್ಲಿ ಚೆಂಡು ಬೌನ್ಸ್ ಆಗುವುದೇ ಇಲ್ಲ. ನೀವು ನಿಮ್ಮ ಬ್ಯಾಟ್‌ಅನ್ನು ಸಂಪೂರ್ಣವಾಗಿ ಉಪಯೋಗಿಸಿ ಬಾರಿಸಬೇಕು. ಅಥವಾ ಬ್ಯಾಟ್‌ಅನ್ನು ಲಂಬವಾಗಿ ಬಾರಿಸಬೇಕಾಗುತ್ತದೆ. ಅಜಿಂಕ್ಯಾ ರಹಾನೆ ಹೀಗೆ ತಪ್ಪಾಗಿ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವ ಕಾರಣದಿಂದಾಗಿಯೇ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ” ಎಂದು ಲಕ್ಷ್ಮಣ್ ಹೇಳಿದ್ದಾರೆ.

ಇದೇವೇಳೆ ಶ್ರೇಯಸ್ ಅಯ್ಯರ್ ಆಟವನ್ನು ಲಕ್ಷ್ಮಣ್ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ” ಅಯ್ಯರ್‌ ಅವರ ಆಟವನ್ನು ಎಷ್ಟು ಹೊಗಳಿದರೂ ಸಾಲದು. ಏಕೆಂದರೆ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅವರು ಕೊನೆಯ ಪಂದ್ಯವನ್ನು ಆಡಿರುವುದು 2 ವರ್ಷಗಳ ಹಿಂದೆ. ಹೀಗಾಗಿ ಯಾವುದೇ ಆಟಗಾರನಿಗೆ ವೈಟ್‌ ಬಾಲ್‌ ಕ್ರಿಕೆಟ್‌ನಿಂದ ರೆಡ್‌ ಬಾಲ್‌ ಕ್ರಿಕೆಟ್‌ಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಿರುತ್ತದೆ. ಆದರೆ, ಅಯ್ಯರ್‌ ಎಲ್ಲಿಯೂ ವಿಚಲಿತರಾಗಲಿಲ್ಲ. ಮುಂಬೈ ಮತ್ತು ಭಾರತ ‘ಎ’ ತಂಡದ ಪರ ಆಡಿದ ಮಾದರಿಯಲ್ಲೇ ಇಲ್ಲಿಯೂ ಬ್ಯಾಟ್‌ ಬೀಸಿದರು” ಎಂದು ಹೇಳಿದ್ದಾರೆ.

“ಅಯ್ಯರ್ ಒತ್ತಡವನ್ನು ನಿಭಾಯಿಸಿದ ರೀತಿ ಅವರ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡುತ್ತದೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಇಂಥದ್ದೇ ಹಲವು ಇನಿಂಗ್ಸ್‌ಗಳನ್ನು ಆಡಿದ್ದಾರೆ. ಪದಾರ್ಪಣೆಯ ಪಂದ್ಯದಲ್ಲಿ ಯುವ ಆಟಗಾರ ಮಿಂಚಿರುವುದು ಭಾರತ ತಂಡಕ್ಕೆ ಬಹುದೊಡ್ಡ ಸಂಗತಿ ಆಗಿದೆ” ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಲಕ್ಷ್ಮಣ್‌ ಹೇಳಿದ್ದಾರೆ.

IND vs NZ, 1st Test, Day 2: ಕುತೂಹಲ ಕೆರಳಿಸಿದ ಎರಡನೇ ದಿನದಾಟ: ಶತಕದತ್ತ ಅಯ್ಯರ್: 400ರ ಗಡಿ ದಾಟುತ್ತಾ ಭಾರತ

(India vs New Zealand 1st Test VVS Laxman questioned Ajinkya Rahanes shot selection after out for 35)