India vs New Zealand 2nd ODI: ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸರಣಿ ಭಾರತದ ವಶವಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್ಗಳ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲೂ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದು ಭಾರತ ಮೂರನೇ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ವಶಪಡಿಸಿಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಬೌಲಿಂಗ್ ಆರಂಭಿಸಿದ ಮೊಹಮ್ಮದ್ ಶಮಿ ಮೊದಲ ಓವರ್ನಲ್ಲೇ ಫಿನ್ ಅಲೆನ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದ್ದರು. ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಹೆನ್ರಿ ನಿಕೋಲ್ಸ್ (2) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು 7ನೇ ಓವರ್ನಲ್ಲಿ ಮೊಹಮ್ಮದ್ ಶಮಿ ಡೆರಿಲ್ ಮಿಚೆಲ್ (1) ರನ್ನು ಔಟ್ ಮಾಡಿದರು.
ಅತ್ತ ಕೇವಲ 9 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತೊಂದು ಶಾಕ್ ನೀಡಿದರು. 7 ರನ್ಗಳಿಸಿ ಎಚ್ಚರಿಕೆಯಿಂದ ಬ್ಯಾಟ್ ಮಾಡುತ್ತಿದ್ದ ಕಾನ್ವೆಯನ್ನು ಪಾಂಡ್ಯ ಅತ್ಯುತ್ತಮ ಕ್ಯಾಚ್ ಮೂಲಕ ಔಟ್ ಮಾಡಿದರು. ಇದರ ಬೆನ್ನಲ್ಲೇ ಟಾಮ್ ಲಾಥಮ್ (1) ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ಕೇವಲ 15 ರನ್ಗಳಿಗೆ ನ್ಯೂಜಿಲೆಂಡ್ ತಂಡವು 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದಾಗ್ಯೂ ಕಿವೀಸ್ ತಂಡದ ಭರವಸೆ ಮೈಕೆಲ್ ಬ್ರೇಸ್‌ವೆಲ್ ಮೇಲಿತ್ತು. ಆದರೆ 22 ರನ್ಗಳಿಸಿದ್ದ ಬೇಸ್ವೆಲ್ ರನ್ನು ಔಟ್ ಮಾಡುವಲ್ಲಿ ಶಮಿ ಯಶಸ್ವಿಯಾದರು. ಇದಾಗ್ಯೂ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಪ್ಸ್ ಮಧ್ಯಮ ಕ್ರಮಾಂಕದಲ್ಲಿ 47 ರನ್ಗಳ ಜೊತೆಯಾಟವಾಡಿದರು. ಪರಿಣಾಮ ನ್ಯೂಜಿಲೆಂಡ್ ಮೊತ್ತವು 100ರ ಗಡಿದಾಟಿತು.
ಈ ಹಂತದಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಮಿಚೆಲ್ ಸ್ಯಾಂಟ್ನರ್ (27) ರನ್ನು ಬೌಲ್ಡ್ ಮಾಡಿದರು. ಮತ್ತೊಂದೆಡೆ ಸ್ಪಿನ್ ಮೋಡಿ ಮಾಡಿದ ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ಗ್ಲೆನ್ ಫಿಲಿಪ್ಸ್ (36) ಹಾಗೂ ಲಾಕಿ ಫರ್ಗುಸನ್ ವಿಕೆಟ್ ಕಬಳಿಸಿದರು. ಇನ್ನು ಟಿಕ್ನರ್ ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಕುಲ್ದೀಪ್ ಯಾದವ್ ಅಂತಿಮ ವಿಕೆಟ್ ಪಡೆದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು 34.3 ಓವರ್ಗಳಲ್ಲಿ ಕೇವಲ 108 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 6 ಓವರ್ನಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರೆ, ಸಿರಾಜ್ ಹಾಗೂ ಸುಂದರ್ ತಲಾ 2 ವಿಕೆಟ್ ಕಬಳಿಸಿದರು.
109 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹಿಟ್ಮ್ಯಾನ್ ಸಿಕ್ಸ್ ಫೋರ್ಗಳ ಸುರಿಮಳೆಗೈದರು. ಪರಿಣಾಮ 10ನೇ ಓವರ್ನಲ್ಲೇ ಟೀಮ್ ಇಂಡಿಯಾ ಮೊತ್ತ 50ರ ಗಡಿದಾಟಿತು. ಅಲ್ಲದೆ 47 ಎಸೆತಗಳಲ್ಲಿ ರೋಹಿತ್ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ಹಾಫ್ ಸೆಂಚುರಿ ಬೆನ್ನಲ್ಲೇ ಹಿಟ್ಮ್ಯಾನ್ (51) ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
ಆ ಬಳಿಕ ಬಂದ ವಿರಾಟ್ ಕೊಹ್ಲಿ 11 ರನ್ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಸ್ಟಂಪ್ ಔಟಾದರು. ಇನ್ನು ಇಶಾನ್ ಕಿಶನ್ ಜತೆಗೂಡಿ ಅಜೇಯ 40 ರನ್ ಬಾರಿಸಿದ ಶುಭ್ಮನ್ ಗಿಲ್ ಟೀಮ್ ಇಂಡಿಯಾವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಟೀಮ್ ಇಂಡಿಯಾ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಭಾರತ ತಂಡವು ವಶಪಡಿಸಿಕೊಂಡಿದೆ. ಇನ್ನು ಮೂರನೇ ಏಕದಿನ ಪಂದ್ಯವು ಜನವರಿ 24 ರಂದು ನಡೆಯಲಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.