IND vs PAK: ಕಾಳಸಂತೆಯಲ್ಲಿ ಭಾರತ-ಪಾಕ್ ಪಂದ್ಯದ ಟಿಕೆಟ್ ಬೆಲೆ ಎಷ್ಟು ಲಕ್ಷ ರೂಗಳು ಗೊತ್ತಾ?
Champions Trophy 2025: ಭಾರತ ಮತ್ತು ಪಾಕಿಸ್ತಾನದ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗಿವೆ. ಆದರೆ, ಕಾಳಸಂತೆಯಲ್ಲಿ ಟಿಕೆಟ್‌ಗಳ ಬೆಲೆ 4-5 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. 2024ರ ಟಿ20 ವಿಶ್ವಕಪ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು. ಇದೀಗ ವರ್ಷದ ಬಳಿಕ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದೇ ಫೆಬ್ರವರಿ 19 ರಿಂದ ಪ್ರಾರಂಭವಾಗುತ್ತಿದೆ. ಆದರೆ ಈ ಪಂದ್ಯಾವಳಿಯ ಅತ್ಯಂತ ಹೈವೋಲ್ಟೇಜ್ ಕದನ ಭಾರತ ಮತ್ತು ಪಾಕಿಸ್ತಾನ ನಡುವೆ ಫೆಬ್ರವರಿ 23 ರಂದು ನಡೆಯಲಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾದರೂ, ವರದಿಗಳ ಪ್ರಕಾರ, ಈ ಪಂದ್ಯದ ಟಿಕೆಟ್‌ಗಳು ಕಾಳಸಂತೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಈ ಪಂದ್ಯವನ್ನು ವೀಕ್ಷಿಸಲು ತುಂಬಾ ಬೇಡಿಕೆ ಇರುವ ಕಾರಣ ಹೆಚ್ಚಿನ ಜನರು ಕಾಳಸಂತೆಯಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಈ ಪಂದ್ಯದ ಟಿಕೆಟ್ ಬೆಲೆ ಗಗನಕ್ಕೇರಿದೆ. ಮಾಧ್ಯಮ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು 4 ರಿಂದ 5 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿವೆ.
ಟಿಕೆಟ್‌ಗಳ ಬೆಲೆ ಲಕ್ಷ ರೂ.
ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನಕ್ಕೆ ವರ್ಷಗಳ ಇತಿಹಾಸವಿದೆ. ಈ ಉಭಯ ತಂಡಗಳ ನಡುವೆ ಯಾವಾಗ ಪಂದ್ಯ ನಡೆದರೂ, ಕ್ರೀಡಾಂಗಣ ಕಿಕ್ಕೀರಿದು ತುಂಬಿರುತ್ತದೆ. ಅಲ್ಲದೆ ಕೆಲವೇ ನಿಮಿಷಗಳಲ್ಲಿ ಈ ಪಂದ್ಯದ ಟಿಕೆಟ್‌ಗಳು ಮಾರಾಟವಾಗಿಬಿಡುತ್ತವೆ. ಹೀಗಾಗಿ ಈ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಕ್ರಿಕೆಟ್ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಅದರಲ್ಲೂ ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್‌ಗಳ ಬೆಲೆಯನ್ನು ನಿರೀಕ್ಷೆಗೂ ಮೀರಿ ಏರಿಸಲಾಗಿರುತ್ತದೆ. ಈ ರೀತಿಯ ನಿದರ್ಶನಗಳನ್ನು ನಾವು ಈ ಹಿಂದೆಯೂ ನೋಡಿದ್ದೇವು. 2024 ರ ಟಿ20 ವಿಶ್ವಕಪ್ ಸಮಯದಲ್ಲೂ ಈ ಪಂದ್ಯದ ಟಿಕೆಟ್‌ನ ಬೆಲೆ ಕಾಳಸಂತೆಯಲ್ಲಿ 16 ಲಕ್ಷ ರೂ.ಗಳನ್ನು ತಲುಪಿತ್ತು. ಅಷ್ಟೇ ಅಲ್ಲ, ಪಂದ್ಯದ ಟಿಕೆಟ್‌ನ ಬೆಲೆ 1.86 ಕೋಟಿ ರೂ.ಗಳಿಗೆ ಏರಿದೆ ಎಂದು ಹಲವು ವರದಿಗಳಲ್ಲಿ ಹೇಳಲಾಗಿತ್ತು.
ಇದೀಗ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಲಕ್ಷಗಳಲ್ಲಿ ಮಾರಾಟವಾಗುತ್ತಿವೆ. ಒಂದು ವೆಬ್‌ಸೈಟ್‌ನಲ್ಲಿ ಈ ಪಂದ್ಯದ ಗ್ರ್ಯಾಂಡ್ ಲೌಂಜ್ ಟಿಕೆಟ್‌ನ ಬೆಲೆಯನ್ನು 4 ಲಕ್ಷ 29 ಸಾವಿರ ರೂ.ಗೆ ಮಾರಾಟಕ್ಕೀಡಲಾಗಿದೆ. ಹಾಗೆಯೇ ಅದೇ ಗ್ರ್ಯಾಂಡ್ ಲೌಂಜ್‌ನಲ್ಲಿನ ಉತ್ತಮ ಆಸನದ ಬೆಲೆಯನ್ನು ಸುಮಾರು 5 ಲಕ್ಷ ರೂಗೆ ಮಾರಾಟ ಮಾಡಲಾಗುತ್ತಿದೆ.
ಭಾರತ-ಪಾಕ್ ಫೈಟ್
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಎರಡೂ ದೇಶಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು 2017 ರಲ್ಲಿ. 2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:00 pm, Mon, 17 February 25
