ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಸೃಷ್ಟಿಸಿದ ಓಮನ್
Namibia vs Oman: ಓಮನ್ ತಂಡವು ನಮೀಬಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಸ್ಪಿನ್ನರ್‌ಗಳ ಮೂಲಕ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಒಬ್ಬ ವೇಗದ ಬೌಲರ್ ಬಳಸದೆ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಓಮನ್ ಪಾತ್ರವಾಗಿದೆ. ನಮೀಬಿಯಾ 96 ರನ್‌ಗಳಿಗೆ ಆಲೌಟ್ ಆದರೆ, ಓಮನ್ ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಿತು.

ಒಂದೆಡೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಚಾಂಪಿಯನ್ಸ್ ಟ್ರೋಫಿಯ ಮೇಲೆ ಕೇಂದ್ರೀಕೃತವಾಗಿದ್ದರೆ ಮತ್ತೊಂದೆಡೆ, ಅಲ್ ಎಮಿರೇಟ್ಸ್‌ನಲ್ಲಿ ನಡೆದ ಪಂದ್ಯದಲ್ಲಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದಾಖಲೆ ನಿರ್ಮಿಸಲಾಗಿದೆ. ಈ ಪಂದ್ಯ ನಮೀಬಿಯಾ ಮತ್ತು ಓಮನ್ ನಡುವೆ ನಡೆದಿತ್ತು. ಈ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದುಕೊಂಡ ಓಮನ್ ಈ ಪಂದ್ಯದಲ್ಲಿ ಅದ್ಭುತ ದಾಖಲೆಯೊಂದನ್ನು ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಓಮನ್ ತಂಡದ ಸ್ಪಿನ್ನರ್‌ಗಳು ಎದುರಾಳಿ ನಮೀಬಿಯಾ ತಂಡವನ್ನು 96 ರನ್‌ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಓಮನ್ ಒಬ್ಬನೇ ಒಬ್ಬ ವೇಗದ ಬೌಲರ್ ಬಳಸದೆ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೊದಲ ತಂಡ ಎಂಬ ಇತಿಹಾಸ ಸೃಷ್ಟಿಸಿದೆ.
ಓಮನ್ ಸ್ಪಿನ್ನರ್‌ಗಳ ಮ್ಯಾಜಿಕ್
ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಓಮನ್ ತಂಡ, ಮೊದಲ ಓವರ್ನಿಂದಲೇ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿತು. ತಂಡದ ಪರ ಆಫ್-ಸ್ಪಿನ್ನರ್ ಜೇ ಒಡೆರಾ ಮೊದಲ ಓವರ್ ಎಸೆದರೆ, ಎರಡನೇ ಓವರ್ ಅನ್ನು ಎಡಗೈ ಸ್ಪಿನ್ನರ್ ಶಕೀಲ್ ಅಹ್ಮದ್ ಬೌಲ್ ಮಾಡಿದರು. ಈ ಇಬ್ಬರೂ ಒಟ್ಟಾಗಿ ನಮೀಬಿಯಾದ 6 ವಿಕೆಟ್‌ಗಳನ್ನು ಕಬಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಮತ್ತೊಬ್ಬ ಸ್ಪಿನ್ನರ್ ಆಮಿರ್ ಕಲೀಮ್ ಕೂಡ 2 ವಿಕೆಟ್ ಪಡೆದರು. ಇದಲ್ಲದೆ, ಸಿದ್ಧಾರ್ಥ್ ಬುಕ್ಕಪಟ್ಟಣಂ ಮತ್ತು ಸಮಯ್ ಶ್ರೀವಾಸ್ತವ ತಲಾ 1 ವಿಕೆಟ್ ಪಡೆದರು. ಇತ್ತ ಮೊದಲು ಬ್ಯಾಟಿಂಗ್ ಮಾಡಿದ ಇಡೀ ನಮೀಬಿಯಾ ತಂಡ 33.1 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು.
ಓಮನ್ ತಂಡಕ್ಕೆ ಗೆಲುವು
ಓಮನ್ ತಂಡಕ್ಕೆ ಕಡಿಮೆ ಗುರಿ ಇತ್ತಾದರೂ 97 ರನ್‌ಗಳ ಗುರಿ ಬೆನ್ನಟ್ಟಲು ಓಮನ್ ಹರಸಾಹಸ ಪಡಬೇಕಾಯಿತು. ಆಮಿರ್ ಕಲೀಮ್ ಮತ್ತು ಜತಿಂದರ್ ಸಿಂಗ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಜತಿಂದರ್ ಸಿಂಗ್ ಔಟಾದ ತಕ್ಷಣ ಪರಿಸ್ಥಿತಿ ಬದಲಾಯಿತು. 42 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಓಮನ್ ತಂಡ, ಸ್ವಲ್ಪ ಹೊತ್ತಿನಲ್ಲೇ 79 ರನ್ ಗಳಿಗೆ 5 ವಿಕೆಟ್ ಗಳನ್ನು ಕಳೆದುಕೊಂಡಿತು. ಇದಾದ ನಂತರ 87 ರನ್‌ಗಳಿಗೆ 8 ವಿಕೆಟ್‌ಗಳು ಪತನಗೊಂಡವು. ಕೊನೆಯಲ್ಲಿ, ಹಶೀರ್ ದಫೇದಾರ್ ಮತ್ತು ಸಿದ್ಧಾರ್ಥ್ ಸಮಯೋಜಿತ ಬ್ಯಾಟಿಂಗ್ ಮಾಡಿ ಓಮನ್ ತಂಡಕ್ಕೆ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
