
T20 World Cup 2024: ನ್ಯೂಯಾರ್ಕ್ನ ನಸ್ಸೌ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರಿಷಭ್ ಪಂತ್ 42 ರನ್ ಬಾರಿಸಿದ್ದು ಬಿಟ್ಟರೆ, ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಭಾರತ ತಂಡವು 19 ಓವರ್ಗಳಲ್ಲಿ 119 ರನ್ಗಳಿಸಿ ಆಲೌಟ್ ಆಯಿತು.
120 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿಗೆ ರನ್ ಗಳಿಸಲು ಪರದಾಡಿದ ಪಾಕ್ ಬ್ಯಾಟರ್ಗಳು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತು.
ಈ ರೋಚಕ ಗೆಲುವಿನ ಬೆನ್ನಲ್ಲೇ ಭಾರತೀಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಪಂದ್ಯ ನಡೆದ ನ್ಯೂಯಾರ್ಕ್ ಸ್ಟೇಡಿಯಂನ ಹೊರಗೆ ಅಭಿಮಾನಿಗಳು ಬ್ಯಾಂಡ್ ಬಜಾಯಿಸುವ ಮೂಲಕ ಕುಣಿದು ಕುಪ್ಪಳಿಸಿದರು.
ಅತ್ತ ದೂರದ ದುಬೈನಲ್ಲಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದರು. ಇನ್ನು ಇಂದೋರ್ನಲ್ಲಿ ಅಭಿಮಾನಿಗಳು ಧ್ವಜಗಳೊಂದಿಗೆ ರಸ್ತೆಗಿಳಿದು ಹರ್ಷೋದ್ಘಾರದೊಂದಿಗೆ ಕುಣಿದು ಕುಪ್ಪಳಿಸಿದರು.
ಪುಣೆಯ ಅಭಿಮಾನಿಗಳು ಒಂದೆಜ್ಜೆ ಮುಂದೆ ಹೋಗಿ ಬುಲ್ಡೋಝರ್ ಮೇಲೆ ನಿಂತು ಜಯಕಾರ ಹಾಕುತ್ತಾ ಸಂಭ್ರಮಿಸಿದರು. ಈ ಭರ್ಜರಿ ಸಂಭ್ರಮಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರಿಂದಲೂ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಭಾರತ ತಂಡವು ಜೂನ್ 12 ರಂದು ಯುಎಸ್ಎ ವಿರುದ್ಧ ಕಣಕ್ಕಿಳಿಯಲಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೂಪರ್-8 ಹಂತಕ್ಕೇರಲಿದೆ. ಹೀಗಾಗಿ ಮುಂದಿನ ಪಂದ್ಯದ ಮೂಲಕ ಭಾರತ ತಂಡ ಮುಂದಿನ ಹಂತಕ್ಕೇರುವುದನ್ನು ಎದುರು ನೋಡಬಹುದು.