ಬ್ಯಾಟ್ಸ್ಮನ್ ಸೂರ್ಯ ಕಾಣೆಯಾಗಿದ್ದಾರೆ: ಸೂರ್ಯಕುಮಾರ್ ಯಾದವ್
India vs South Africa: ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ೨೦ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 201 ರನ್ ಗಳಿಸಿ 30 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 30 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸರಣಿಯ ಆರಂಭದಿಂದಲೂ, ನಾವು ಒಂದು ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್‌ಗೆ ಅಂಟಿಕೊಳ್ಳಬೇಕೆಂದು ಬಯಸಿದ್ದೆವು. ಇದೀಗ ನಾವು ಅದನ್ನೇ ಮಾಡಿದ್ದೇವೆ. ನಾವು ವಿಭಿನ್ನವಾಗಿ ಏನನ್ನೂ ಮಾಡಲು ಪ್ರಯತ್ನಿಸಲಿಲ್ಲ. ನಾವು ಎಲ್ಲಾ ವಿಭಾಗಗಳಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಲು ಬಯಸಿದ್ದೆವು. ಇದೀಗ ಫಲಿತಾಂಶ ನಮ್ಮ ಮುಂದೆಯಿದೆ.
ಕಳೆದ ಕೆಲ ಸರಣಿಗಳಲ್ಲಿ ಟೀಮ್ ಇಂಡಿಯಾ ಕಡೆಯಿಂದ ಇಂತಹದೊಂದು ಪ್ರದರ್ಶನ ಮಾಯವಾಗಿತ್ತು. ನಾವು ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಲು ಬಯಸಿದ್ದೆವು. ಇದೀಗ ಈ ಯೋಜನೆಯು ಫಲ ನೀಡಿದೆ. ಇದಾಗ್ಯೂ ನನ್ನ ಕಡೆಯಿಂದ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ ಎಂದು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ.
ಬಹುಶಃ ನಮಗೆ “ಸೂರ್ಯ ದಿ ಬ್ಯಾಟರ್” ಕಾಣಿಸದಿರುವುದು ಒಂದೇ ಕೊರತೆ. ಅವನು ಎಲ್ಲೋ ಕಾಣೆಯಾಗಿದ್ದಾನೆ ಅಂತ ನನಗೆ ಅನಿಸುತ್ತದೆ!. ಆದರೆ ಖಂಡಿತವಾಗಿಯೂ ಅವನು ಇನ್ನೂ ಬಲಿಷ್ಠನಾಗಿ ಕಂಬ್ಯಾಕ್ ಮಾಡಲಿದ್ದಾನೆ ಎಂದು ಸೂರ್ಯಕುಮಾರ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಒಂದು ತಂಡವಾಗಿ, ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ. ಏಕೆಂದರೆ ತಂಡವು ಸಂಕಷ್ಟದಲ್ಲಿದ್ದಾಗಲೆಲ್ಲಾ, ಯಾರಾದರೂ ಯಾವಾಗಲೂ ಕೊಡುಗೆ ನೀಡುತ್ತಾರೆ. ತಂಡದ ಇಂತಹ ಪ್ರದರ್ಶನದಿಂದ ನಾಯಕನಾಗಿ, ಅದು ತುಂಬಾ ತೃಪ್ತಿಕರವಾಗಿದೆ ಎಂದು ಸೂರ್ಯಕುಮಾರ್ ಯಾದವ್ ಇದೇ ವೇಳೆ ಹೇಳಿದರು.
ಇದನ್ನೂ ಓದಿ: ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ
ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಕಡೆಯಿಂದ ಪಾಸಿಟಿವ್ ಪ್ರದರ್ಶನ ಮೂಡಿಬಂದಿದೆ. ಇದಾಗ್ಯೂ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದೆ. ಈ ವೈಫಲ್ಯದಿಂದ ಶೀಘ್ರದಲ್ಲೇ ಹೊರಬರಲಿದ್ದೇನೆ ಎಂದು ಖುದ್ದು ಸೂರ್ಯಕುಮಾರ್ ಯಾದವ್ ಅವರೇ ಹೇಳಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯನ ಕಡೆಯಿಂದ ಪ್ರಚಂಡ ಬ್ಯಾಟಿಂಗ್ ನಿರೀಕ್ಷಿಸಬಹುದು.
Published On - 9:32 am, Sat, 20 December 25
