T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ್ (India vs Pakistan) ತಂಡವನ್ನು ಸದೆ ಬಡಿದು ಟೀಮ್ ಇಂಡಿಯಾ (Team India ಭರ್ಜರಿ ಜಯ ಸಾಧಿಸಿದೆ. ರಣರೋಚಕ ಹೋರಾಟಕ್ಕೆ ಕಾರಣವಾಗಿದ್ದ ಕೊನೆಯ 3 ಓವರ್ಗಳಲ್ಲಿ ವಿರಾಟ್ ಕೊಹ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಏಕೆಂದರೆ ಅಂತಿಮ 18 ಎಸೆತಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 48 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಶಾಹೀನ್ ಅಫ್ರಿದಿ ಎಸೆದ 18ನೇ ಓವರ್ನಲ್ಲಿ ಕೊಹ್ಲಿ ಮೂರು ಭರ್ಜರಿ ಬೌಂಡರಿ ಬಾರಿಸಿದರು. ಅಲ್ಲದೆ ಆ ಓವರ್ನಲ್ಲಿ 17 ರನ್ ಕಲೆಹಾಕಿದರು. ಅಂತಿಮ 12 ಎಸೆತಗಳಲ್ಲಿ 31 ರನ್ ಗಳಿಸಬೇಕಿತ್ತು. ಪಾಕ್ ವೇಗಿ ಹ್ಯಾರಿಸ್ ರೌಫ್ ಎಸೆದ 19ನೇ ಓವರ್ನಲ್ಲಿ ಭರ್ಜರಿ 2 ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು.
ಆದರೆ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಬರೋಬ್ಬರಿ 16 ರನ್ಗಳ ಅವಶ್ಯಕತೆಯಿತ್ತು. ಮೊಹಮ್ಮದ್ ನವಾಜ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ಹೊರನಡೆದರು. ಇನ್ನು 2ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಂಗಲ್ ತೆಗೆದರು.
ಕೊನೆಯ 4 ಎಸೆತಗಳಲ್ಲಿ 15 ರನ್ಗಳ ಟಾರ್ಗೆಟ್ಯಿತ್ತು. ಈ ವೇಳೆ ನವಾಜ್ ಎಸೆತದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಆದರೆ ಆ ಎಸೆತ ಕೊಹ್ಲಿಯ ಸೊಂಟಕ್ಕಿಂತ ಮೇಲಿದ್ದ ಕಾರಣ ನೋ ಬಾಲ್ಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಲೆಗ್ ಅಂಪೈರ್ ನೋ ಬಾಲ್ ನೀಡಿದ್ದರು. ಇದು ನಾಟಕೀಯ ಸನ್ನಿವೇಶಕ್ಕೆ ಕಾರಣವಾಯ್ತು.
ಪಾಕ್ ತಂಡದ ನಾಯಕ ಬಾಬರ್ ಆಜಂ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಆ ಬಳಿಕ ಅಂಪೈರ್ ಪರಿಸ್ಥಿತಿ ತಿಳಿಗೊಳಿಸಿ ಪಂದ್ಯವನ್ನು ಮುಂದುವರೆಸಿದ್ದರು. ಇದಾದ ಬಳಿಕ ನವಾಜ್ ವೈಡ್ ಎಸೆದರು. ಆ ನಂತರದ ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆದರು. ಆದರೆ ಅದಕ್ಕೂ ಮುನ್ನ ಎಸೆದ ನೋ ಬಾಲ್ ಕಾರಣ ಅದು ಫ್ರೀ ಹಿಟ್ ಆಗಿತ್ತು.
ಅಚ್ಚರಿ ಎಂದರೆ ಫ್ರೀ ಹಿಟ್ನಲ್ಲಿ ಬೌಲ್ಡ್ ಆಗಿದ್ದರೂ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಮೂರು ರನ್ ಓಡಿದರು. ಬೌಲ್ಡ್ ಆದರೆ ಅದು ಡೆಡ್ ಬಾಲ್ ಎನ್ನುವ ಮನವಿಯನ್ನು ಪಾಕ್ ಆಟಗಾರರು ಅಂಪೈರ್ ಮುಂದಿಟ್ಟರು. ಈ ವೇಳೆ ಐಸಿಸಿ ನಿಯಮ ತಿಳಿಸುವ ಮೂಲಕ ಪಂದ್ಯವನ್ನು ಮುಂದುವರೆಸಲಾಯಿತು.
ಇನ್ನು 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟಾದರೆ, 6ನೇ ಎಸೆತದಲ್ಲಿ ನವಾಜ್ ಮತ್ತೊಂದು ವೈಡ್ ಎಸೆದರು. ಅದರಂತೆ ಅಂತಿಮವಾಗಿ 1 ಎಸೆತದಲ್ಲಿ 1 ರನ್ ಬೇಕಿತ್ತು. ಈ ವೇಳೆ ಅಶ್ವಿನ್ ಸಿಂಗಲ್ ತೆಗೆಯುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟರು.
ಆದರೆ ಈ ಗೆಲುವಿನ ಬಳಿಕ ಅಂಪೈರ್ ತೀರ್ಮಾನಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ನೋ ಬಾಲ್ ತೀರ್ಪು ಹಾಗೂ ಫ್ರೀಹಿಟ್ನಲ್ಲಿ ಬೈ ರನ್ ನೀಡಿದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಕಂಡು ಬಂತು. ಈ ಎಲ್ಲಾ ಚರ್ಚೆಗಳಿಗೆ ಐಸಿಸಿ ನಿಯಮವೊಂದೇ ಉತ್ತರ. ಹಾಗಿದ್ರೆ ನೋ ಬಾಲ್ ಹಾಗೂ ಫ್ರೀ ಹಿಟ್ನ ನಿಯಮಗಳೇನು ಎಂದು ನೋಡೋಣ…
ನೋ ಬಾಲ್ ನಿಯಮ: ಐಸಿಸಿ ಕ್ರಿಕೆಟ್ ನಿಯಮಗಳ ಷರತ್ತು 41.7.1 ಪ್ರಕಾರ, ಬ್ಯಾಟ್ಸ್ಮನ್ ಕ್ರೀಸ್ನಲ್ಲಿದ್ದು ಸೊಂಟದ ಎತ್ತರದ ಮೇಲೆ ಚೆಂಡು ಬಂದಿದ್ದರೆ ಅದನ್ನು ನೋ ಬಾಲ್ ಎಂದು ತೀರ್ಪು ನೀಡಬಹುದು. ಈ ಹಿಂದೆ ವೇಗದ ಬೌಲಿಂಗ್ನಲ್ಲಿ ಮಾತ್ರ ಈ ನಿಯಮಗಳನ್ನು ಅಳವಡಿಸಲಾಗುತ್ತಿತ್ತು. ಆದರೆ 2017 ರಲ್ಲಿ ನವೀಕರಿಸಲಾದ ಹೊಸ ನಿಯಮದ ಪ್ರಕಾರ ಈ ನಿಯಮವು ಸ್ಪಿನ್ನರ್ಗಳಿಗೂ ಅನ್ವಯಿಸುತ್ತದೆ. ಅದರಂತೆ ನಿಧಾನಗತಿಯ ಬೌಲರ್ಗಳು ಸೊಂಟದ ನೇರವಾಗಿ ಚೆಂಡೆಸೆದರೆ ಅದನ್ನು ನೋ ಬಾಲ್ ಎಂದು ತೀರ್ಪು ನೀಡಬಹುದಾಗಿದೆ. ಅದರಂತೆ ವಿರಾಟ್ ಕೊಹ್ಲಿಗೆ ಎಸೆದ ಮೊಹಮ್ಮದ್ ನವಾಜ್ ಎಸೆತವನ್ನು ಲೆಗ್ ಅಂಪೈರ್ ನೋ ಬಾಲ್ ನೀಡಿದ್ದರು.
ಫ್ರೀ ಹಿಟ್ ನಿಯಮ: ಐಸಿಸಿ ಕ್ರಿಕೆಟ್ ನಿಯಮಗಳ ಷರತ್ತು 21.19.2 ಪ್ರಕಾರ, ಫ್ರೀ ಹಿಟ್ನಲ್ಲಿ ಔಟ್ ಮಾಡಲು ಇರುವ ಏಕೈಕ ಮಾರ್ಗವೆಂದರೆ ರನೌಟ್. ಇದಾಗ್ಯೂ ಸ್ಟ್ರೈಕರ್ ಫೀಲ್ಡರ್ನ ಅಡ್ಡಿಪಡಿಸಿದರೆ ಅಥವಾ ಚೆಂಡನ್ನು ಉದ್ದೇಶಪೂರ್ವಕವಾಗಿ 2 ಬಾರಿ ಹೊಡೆದರೆ ಕೂಡ ಔಟ್ ನೀಡಬಹುದು. ಆದರೆ ವಿರಾಟ್ ಕೊಹ್ಲಿ ನೇರವಾಗಿ ಬೌಲ್ಡ್ ಆಗಿದ್ದರು. ಹಾಗಿದ್ರೆ ಅದು ಡೆಡ್ ಬಾಲ್ ಅಲ್ಲವೇ ಎಂಬ ಪ್ರಶ್ನೆಯೊಂದು ಮೂಡುತ್ತದೆ.
ಆದರೆ ಐಸಿಸಿ ನಿಯಮಗಳ ಪ್ರಕಾರ ಬೌಲಿಂಗ್ ಮಾಡಿದ ಬಳಿಕ ಚೆಂಡು ವಿಕೆಟ್ ಕೀಪರ್ ಅಥವಾ ಬೌಲರ್ ಕೈ ಸೇರಿದ ಬಳಿಕವಷ್ಟೇ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಬೌಲಿಂಗ್ ಮಾಡುವ ವೇಳೆ ಬೇಲ್ಸ್ ಬಿದ್ದರೆ ಅಥವಾ ವಿಕೆಟ್ ಚದುರಿದರೆ ಡೆಡ್ ಬಾಲ್ ತೀರ್ಪು ನೀಡಬಹುದು. ಆದರೆ ಫ್ರೀಹಿಟ್ ವೇಳೆ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ.
ಅದರಲ್ಲೂ ಚೆಂಡು ವಿಕೆಟ್ ಕೀಪರ್ ಅಥವಾ ಬೌಲರ್ನ ಕೈ ಸೇರಿರಲಿಲ್ಲ. ಇತ್ತ ವಿರಾಟ್ ಕೊಹ್ಲಿ ಬೌಲ್ಡ್ ಆದರೂ ಚೆಂಡು ಥರ್ಡ್ಮ್ಯಾನ್ ಫೀಲ್ಡರ್ನತ್ತ ಸಾಗಿತು. ಇದರ ಸಂಪೂರ್ಣ ಲಾಭ ಪಡೆದುಕೊಂಡ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ಮೂರು ರನ್ ಓಡಿದರು. ಹೀಗಾಗಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಕಲೆಹಾಕಿದ 3 ರನ್ಗಳನ್ನು ಅಂಪೈರ್ ಬೈಸ್ ರನ್ ಎಂದು ಪರಿಗಣಿಸಿದರು.
ಫ್ರೀಹಿಟ್ನಲ್ಲಿ ಬೌಲ್ಡ್ ಆದರೂ ಮೂರು ರನ್ ಓಡುವ ಮೂಲಕ ಟೀಮ್ ಇಂಡಿಯಾ ಆಟಗಾರರು ಜಾಣ್ಮೆ ಮೆರೆದರೆ, ಅತ್ತ ಏನಾಗುತ್ತಿದೆ ಎಂದು ಅರಿಯದೇ ಪಾಕಿಸ್ತಾನ್ ಆಟಗಾರರು ಪಂದ್ಯವನ್ನೇ ಕೈಚೆಲ್ಲಿಕೊಂಡರು. ಅದರಂತೆ ಭಾರತ ತಂಡವು ಅಂತಿಮ ಎಸೆತದಲ್ಲಿ 1 ರನ್ ಕಲೆಹಾಕುವ ಮೂಲಕ ಐತಿಹಾಸಿಕ ಗೆಲುವನ್ನು ತಮ್ಮದಾಗಿಸಿಕೊಂಡರು.