
ಭಾರತ ಮತ್ತು ಪಾಕಿಸ್ತಾನ್ (India vs Pakistan) ನಡುವಣ ಪಂದ್ಯದ ವೇಳೆ “ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಿ” ಎಂಬ ಸಂದೇಶದ ಬ್ಯಾನರ್ ಹೊಂದಿರುವ ವಿಮಾನವು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಹಾರಾಡಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಜೈಲಿನಲ್ಲಿದ್ದು, ಹೀಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಬ್ಯಾನರ್ ಪ್ರದರ್ಶಿಸುವ ಮೂಲಕ ಒತ್ತಾಯಿಸಿದರು.
ಪಂದ್ಯದ ನಡುವೆ ವಿಮಾನವು ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಬೇಕೆಂಬ ಬ್ಯಾನರ್ ಪ್ರದರ್ಶಿಸುತ್ತಾ ಮೈದಾನದ ಸುತ್ತಲೂ ಹಾರಾಡುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಈ ಪ್ರತಿಭಟನೆಯ ರೂಪಕದ ಬ್ಯಾನರ್ ಪ್ರದರ್ಶನದ ಹಿಂದೆ ಯಾರಿದ್ದಾರೆ ಎಂಬುದು ತಿಳಿದು ಬಂದಿಲ್ಲ.
#WATCH | An aircraft carrying the message ‘Release Imran Khan’ is seen above Nassau, New York, where India is playing against Pakistan in the T20 World Cup pic.twitter.com/tYxrbKcY7C
— ANI (@ANI) June 9, 2024
ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ತಾವು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿದೇಶಿ ಗಣ್ಯರಿಂದ ಅಕ್ರಮವಾಗಿ ಉಡುಗೊರೆ ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರ ಆರೋಪದಲ್ಲಿ ಬಂಧಿತರಾಗಿದ್ದ ಅವರನ್ನು ತಪ್ಪಿತಸ್ಥ ಎಂದು ಇಸ್ಲಾಮಾಬಾದ್ ಕೋರ್ಟ್ ತೀರ್ಪು ನೀಡಿದೆ.
ಈ ತೀರ್ಪಿನಂತೆ ಇಮ್ರಾನ್ ಖಾನ್ ಅವರಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ 5 ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿಯುವಂತೆ ಸೂಚಿಸಿದೆ. ಅದರಂತೆ ಇದೀಗ ಇಮ್ರಾನ್ ಖಾನ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
1992 ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ್ದ ಇಮ್ರಾನ್ ಖಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದ್ದರು. ಅಲ್ಲದೆ 2018 ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆ ಬಳಿಕ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ್ದ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದ ಬಳಿಕ ಪದಚ್ಯುತಗೊಳಿಸಲಾಗಿತ್ತು.
ಇದನ್ನೂ ಓದಿ: T20 World Cup 2024: ಸೂಪರ್-8 ಹಂತಕ್ಕೇರಲು ಪಾಕಿಸ್ತಾನ್ ತಂಡಕ್ಕೆ ಇನ್ನೂ ಇದೆ ಚಾನ್ಸ್
ಈ ಉಚ್ಚಾಟನೆಯನ್ನು ಇಮ್ರಾನ್ ಖಾನ್ ವಿದೇಶಿ ಪಿತೂರಿ ಎಂದು ಕರೆದಿದ್ದರು. ಆ ಬಳಿಕ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಲಾಗಿತ್ತು. ಇದೀಗ ಈ ಬಂಧನದಿಂದ ಮುಕ್ತಗೊಳಿಸಬೇಕೆಂದು ಅವರ ಬೆಂಬಲಿಗರಿಂದ ಕೂಗುಗಳು ಕೇಳಿ ಬರುತ್ತಿವೆ. ಇದರ ನಡುವೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ವೇಳೆ ಅವರ ಬೆಂಬಲಿಗರು ವಿಮಾನದಲ್ಲಿ ಬ್ಯಾನರ್ ಪ್ರದರ್ಶಿಸಿ ಇಡೀ ವಿಶ್ವದ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.