Asia Cup 2025: ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾದ ಕೈ ಸೇರುವುದು ಯಾವಾಗ?

Asia Cup 2025: 2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಗೆದ್ದರೂ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ನಖ್ವಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗಿ ಹಾಗೂ ಸಚಿವರಾಗಿರುವ ಕಾರಣ ಭಾರತ ತಂಡ ವಿರೋಧ ವ್ಯಕ್ತಪಡಿಸಿತು. ಇದರಿಂದ ಟ್ರೋಫಿ ಪ್ರದಾನ ಸಮಾರಂಭ ವಿವಾದಕ್ಕೀಡಾಯಿತು. ನಾಳೆ ನಡೆಯುವ ಎಸಿಸಿ ಸಭೆಯಲ್ಲಿ ಬಿಸಿಸಿಐ ಟ್ರೋಫಿ ಹಸ್ತಾಂತರಕ್ಕೆ ಒತ್ತಡ ಹೇರಲಿದೆ.

Asia Cup 2025: ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾದ ಕೈ ಸೇರುವುದು ಯಾವಾಗ?
Team India

Updated on: Sep 29, 2025 | 10:38 PM

2025 ರ ಏಷ್ಯಾಕಪ್ (Asia Cup 2025) ಫೈನಲ್​ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ (India vs Pakistan) ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಆದಾಗ್ಯೂ ಭಾರತ ತಂಡಕ್ಕೆ ಟ್ರೋಫಿಯನ್ನು ಹಿಡಿದು ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi ) ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿತು. ಇತ್ತ ಮೊಹ್ಸಿನ್ ನಖ್ವಿ ಕೂಡ ತನ್ನ ಕೈಯಿಂದಲೇ ಭಾರತ ಟ್ರೋಫಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದರು. ಇದರಿಂದಾಗಿ ಪ್ರಶಸ್ತಿ ಪ್ರಸ್ತುತಿ ಸಮಾರಂಭ ಗಂಟೆಗಂಟಲೇ ತಡವಾಗಿ ನಡೆಯಿತು. ಕೊನೆಗೂ ಭಾರತ ತಂಡ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸದೆ, ಮೈದಾನದಲ್ಲಿ ಸಂಭ್ರಮಿಸಿತು. ಇತ್ತ ಟೀಂ ಇಂಡಿಯಾದಿಂದ ನಿರ್ಧಾರದಿಂದ ಮುಜುಗರಕ್ಕೀಡಾಗಿದ್ದ ನಖ್ವಿ ಏಷ್ಯಾಕಪ್ ಟ್ರೋಫಿಯೊಂದಿಗೆ ಮೈದಾನದಿಂದ ಕಾಲ್ಕಿತ್ತಿದ್ದರು. ಇದೀಗ ಚಾಂಪಿಯನ್ ಭಾರತ ತಂಡದ ಕೈಗೆ ಏಷ್ಯಾಕಪ್ ಟ್ರೋಫಿ ಸೇರುವುದು ಯಾವಾಗ ಎಂಬುದು ಪ್ರಶ್ನೆಯಾಗಿದೆ.

ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ

ವಾಸ್ತವವಾಗಿ ನಿಯಮಗಳ ಪ್ರಕಾರ ಎಸಿಸಿ ಮುಖ್ಯಸ್ಥರು ವಿಜೇತರಿಗೆ ಟ್ರೋಫಿಯನ್ನು ನೀಡುವ ಮೊದಲ ಹಕ್ಕನ್ನು ಹೊಂದಿದ್ದಾರೆ. ಅದರಂತೆ ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಅವರ ಕೈಯಿಂದ ಟೀಂ ಇಂಡಿಯಾ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸಬೇಕಿತ್ತು. ಆದರೆ ಇದಕ್ಕೆ ಟೀಂ ಇಂಡಿಯಾ ಸಿದ್ಧವಿರಲಿಲ್ಲ. ಇದಕ್ಕೆ ಕಾರಣವನ್ನು ನೀಡಿದ ಟೀಂ ಇಂಡಿಯಾ, ಮೊಹ್ಸಿನ್ ನಖ್ವಿ ಎಸಿಸಿ ಅಧ್ಯಕ್ಷರಾಗಿರುವ ಹೊರತಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಪಾಕಿಸ್ತಾನ ಸರ್ಕಾರದಲ್ಲಿ ಅವರು ಸಚಿವರಾಗಿದ್ದಾರೆ. ಇದೆಲ್ಲ ಕಾರಣಗಳನ್ನು ಮುಂದಿಟ್ಟು ಟೀಂ ಇಂಡಿಯಾ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು.

ಟ್ರೋಫಿ ಸ್ವೀಕರಿಸಲು ಬದಲಿ ಆಯ್ಕೆಯನ್ನು ಸೂಚಿಸಿದ್ದ ಬಿಸಿಸಿಐ, ಮೊಹ್ಸಿನ್ ನಖ್ವಿ ಬದಲಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರು ಭಾರತೀಯ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಬೇಕೆಂದು ಕೇಳಿತ್ತು. ಇದಕ್ಕೆ ಒಪ್ಪದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ತೆಗೆದುಕೊಂಡು ತಮ್ಮ ಹೋಟೆಲ್‌ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾ ಟ್ರೋಫಿ ಇಲ್ಲದೆಯೇ ಮೈದಾನದಲ್ಲಿ ಸಂಭ್ರಮಿಸಿತ್ತು. ಇದೀಗ ವರದಿಯಾಗಿರುವಂತೆ ಸೆಪ್ಟೆಂಬರ್ 30 ರಂದು ಅಂದರೆ ನಾಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಏಷ್ಯಾಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬಿಸಿಸಿಐ ಒತ್ತಡ ಹೆರಲಿದೆ ಎಂದು ವರದಿಯಾಗಿದೆ.

Asia Cup 2025: ‘ಕೇವಲ ಬೆಳ್ಳಿ ಪಾತ್ರೆ’; ಟ್ರೋಫಿಯೊಂದಿಗೆ ಓಡಿಹೋದ ನಖ್ವಿಗೆ ಸೂರ್ಯ ತಿರುಗೇಟು

ಪಾಕಿಸ್ತಾನವನ್ನು ಸೋಲಿಸಿದ ಭಾರತ

2025ರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್​ಗಳಿಂದ ಸೋಲಿಸಿತು. ಟಾಸ್ ಗೆದ್ದ ಭಾರತ ತಂಡ ಪಾಕಿಸ್ತಾನವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡೊದ ಪಾಕಿಸ್ತಾನ 146 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಭಾರತ 20ನೇ ಓವರ್ ನಲ್ಲಿ ೫ ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us