IND vs SA 2nd ODI Weather: 2ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಧವನ್ ಪಡೆಗೆ ಹೆಚ್ಚಾಯ್ತು ಟೆನ್ಷನ್
IND vs SA 2nd ODI Weather: ರಾಂಚಿಯ ಪ್ರಾದೇಶಿಕ ಹವಾಮಾನ ಇಲಾಖೆಯ ವಿಜ್ಞಾನಿ ಅಭಿಷೇಕ್ ಆನಂದ್ ಟಿವಿ9 ಹಿಂದಿಯೊಂದಿಗೆ ಮಾತನಾಡುತ್ತಾ, 9 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯವಿದ್ದು, ರಾಂಚಿಯಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ ಏಕದಿನ ಸರಣಿಗೆ ಹವಾಮಾನದ ನಿರಂತರವಾಗಿ ಕಾಟ ಕೊಡುತ್ತಲೆ ಬಂದಿದೆ. ಈ ಮುಂಚೆ ಲಕ್ನೋದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಪಂದ್ಯವನ್ನು ತಡವಾಗಿ ಆರಂಭಿಸಲಾಗಿತ್ತು. ಇದೀಗ ರಾಂಚಿಯಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೂ ವರುಣ ಅಡ್ಡಿಪಡಿಸುವ ಎಲ್ಲಾ ಸಾಧ್ಯತೆಗಳಿವೆ. ಸರಣಿಯ ಎರಡನೇ ಪಂದ್ಯವು ಭಾನುವಾರ, ಅಕ್ಟೋಬರ್ 9 ರಂದು ರಾಂಚಿಯಲ್ಲಿ ನಡೆಯಲಿದೆ. ಆದರೆ ಅದಕ್ಕೂ ಒಂದು ದಿನ ಮೊದಲು ಅಂದರೆ ಶನಿವಾರ, ರಾಂಚಿಯಲ್ಲಿ ಮಳೆಯಾಗುತ್ತಿದೆ. ಅಷ್ಟೇ ಅಲ್ಲ, ಭಾನುವಾರವೂ ಮಳೆಯಾಗುವ ಮುನ್ಸೂಚನೆ ಇದೆ.
ಭಾನುವಾರ ರಾಂಚಿಯ ಜೆಎಸ್‌ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ತಂಡ 2ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಲಬಲ ಸಾಧಿಸಲು ಪ್ರಯತ್ನಿಸುತ್ತಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದ ನಿಕಟ ಸೋಲಿನಿಂದ ಚೇತರಿಸಿಕೊಳ್ಳುವ ಭರವಸೆ ಹೊಂದಿದೆ. ಈಗ ಭಾರತ ತಂಡದ ಈ ಪ್ರಯತ್ನ ಯಶಸ್ವಿಯಾಗುತ್ತದೋ ಇಲ್ಲವೋ ಎಂಬುದು ತಂಡದ ಪ್ರದರ್ಶನದ ಜತೆಗೆ ಹವಾಮಾನದ ಮೇಲೂ ನಿಂತಿದೆ.
ಲಕ್ನೋ ನಂತರ ರಾಂಚಿಯಲ್ಲೂ ಮಳೆ
ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಮಳೆಯಿಂದಾಗಿ ಪೂರ್ಣ 50 ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 6 ರಂದು ನಡೆದ ಈ ಪಂದ್ಯದಲ್ಲಿ ಸುಮಾರು ಎರಡೂವರೆ ಗಂಟೆಗಳ ವಿಳಂಬದ ನಂತರ ಪಂದ್ಯ ಆರಂಭಗೊಂಡು ಕೇವಲ 40 ಓವರ್ಗಳ ಪಂದ್ಯ ಮಾತ್ರ ನಡೆಯಿತು. ಈಗ 2ನೇ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದ್ದು, ಭಾನುವಾರವೂ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆದರೆ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಉತ್ತಮ ಸಿದ್ಧತೆ ನಡೆಸಿರುವುದರಿಂದ ಪಂದ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಊಹಿಸಲಾಗಿದೆ. ರಾಂಚಿಯ ಪ್ರಾದೇಶಿಕ ಹವಾಮಾನ ಇಲಾಖೆಯ ವಿಜ್ಞಾನಿ ಅಭಿಷೇಕ್ ಆನಂದ್ ಟಿವಿ9 ಹಿಂದಿಯೊಂದಿಗೆ ಮಾತನಾಡುತ್ತಾ, 9 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯವಿದ್ದು, ರಾಂಚಿಯಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇದಕ್ಕಾಗಿ ಜೆಸಿಎ ಉತ್ತಮ ವ್ಯವಸ್ಥೆ ಮಾಡಿರುವುದರಿಂದ ಮಳೆಯಿಂದ ಪಂದ್ಯಕ್ಕೆ ಹೆಚ್ಚಿನ ತೊಂದರೆಯಾಗದು ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.
ಗಾಯದ ಕಾರಣ ಚಹರ್ ಔಟ್
ಇನ್ನು ಸರಣಿಯ ಬಗ್ಗೆ ಮಾತನಾಡುವುದಾದರೆ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ವೇಗದ ಬೌಲರ್ ದೀಪಕ್ ಚಹರ್ ಇಂಜುರಿಯಿಂದಾಗಿ ಈ ಸರಣಿಯ ಉಳಿದ ಎರಡೂ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಸಮಸ್ಯೆಯಿಂದಾಗಿ ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಚಹರ್ಗೆ ಆಡಲಾಗಲಿಲ್ಲ. ಚಹರ್ ಅಲಭ್ಯತೆಯ ಬಗ್ಗೆ ಶನಿವಾರ ಮಾಹಿತಿ ನೀಡಿದ್ದ ಬಿಸಿಸಿಐ, ಉಳೆದೆರಡು ಪಂದ್ಯಗಳಿಂದ ಚಹರ್ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಆಯ್ಕೆಗಾರರು ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಹೇಳಿತ್ತು.
Published On - 6:50 pm, Sat, 8 October 22