
ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡ 5 ವಿಕೆಟ್ ನಷ್ಟಕ್ಕೆ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಕೊನೆಯ ಇನಿಂಗ್ಸ್ನಲ್ಲಿ ಬರೋಬ್ಬರಿ 549 ರನ್ಗಳ ಕಠಿಣ ಗುರಿ ನೀಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡವು 288 ರನ್ಗಳ ಮುನ್ನಡೆ ಸಾಧಿಸಿತ್ತು. ಅದರಂತೆ ಇದೀಗ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆಲ್ಲಲು ಬರೋಬ್ಬರಿ 549 ರನ್ ಕಲೆಹಾಕಲೇಬೇಕು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸೌತ್ ಆಫ್ರಿಕಾ ದಾಂಡಿಗರು ಪ್ರಥಮ ಇನಿಂಗ್ಸ್ನಲ್ಲಿ ಬರೋಬ್ಬರಿ 489 ರನ್ ಕಲೆಹಾಕಿದ್ದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಗಳಿಸಿದ್ದು ಕೇವಲ 201 ರನ್ಗಳು ಮಾತ್ರ. 288 ರನ್ಗಳ ಮುನ್ನಡೆ ಪಡೆದರೂ ಸೌತ್ ಆಫ್ರಿಕಾ ತಂಡ ಭಾರತದ ಮೇಲೆ ಫಾಲೋಆನ್ ಹೇರಿರಲಿಲ್ಲ. ಬದಲಾಗಿ ಮೂರನೇ ದಿನದಾಟದ ಅಂತ್ಯದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು.
ಅದರಂತೆ ಇದೀಗ ನಾಲ್ಕನೇ ದಿನದಾಟದ ಭೋಜನಾ ವಿರಾಮದ ಬೆನ್ನಲ್ಲೇ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಭಾರತ ತಂಡಕ್ಕೆ ಕೊನೆಯ ಇನಿಂಗ್ಸ್ನಲ್ಲಿ ಬರೋಬ್ಬರಿ 549 ರನ್ಗಳ ಗುರಿ ನೀಡಿದೆ.
ಸೌತ್ ಆಫ್ರಿಕಾ ತಂಡವು 549 ರನ್ಗಳ ಗುರಿ ನೀಡಿರುವುದರಿಂದ ಇಂಡಿಯಾಗೆ ಸರಣಿ ಸೋಲು ಖಚಿತವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸರಣಿಯನ್ನು 1-1 ಅಂತರದಿಂದ ಸಮಗೊಳಿಸಬಹುದು.
ಆದರೆ ಅತ್ತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಸೌತ್ ಆಫ್ರಿಕಾ ತಂಡವು ಈ ಪಂದ್ಯವನ್ನು ಡ್ರಾಗೊಳಿಸಿದರೂ 1-0 ಅಂತರದಿಂದ ಸರಣಿ ಜಯಿಸಬಹುದು. ಹೀಗಾಗಿಯೇ ಸೌತ್ ಆಫ್ರಿಕಾ ತಂಡ ನೀಡಿದ 549 ರನ್ಗಳ ಗುರಿ ಟೀಮ್ ಇಂಡಿಯಾವನ್ನು ಸರಣಿ ಸೋಲಿನತ್ತ ಕೊಂಡೊಯ್ಯಲಿದೆ.
ಏಕೆಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಇನಿಂಗ್ಸ್ನಲ್ಲಿ 500+ ಸ್ಕೋರ್ ಬೆನ್ನತ್ತಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1939 ರಲ್ಲಿ. ಅಂದು ಸೌತ್ ಆಫ್ರಿಕಾ ನೀಡಿದ 696 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 656 ರನ್ಗಳಿಸಿ ಪಂದ್ಯವನ್ನು ಡ್ರಾಗೊಳಿಸಲಷ್ಟೇ ಶಕ್ತರಾಗಿದ್ದರು.
ಇದಾದ ಬಳಿಕ ಯಾವುದೇ ತಂಡ ನಾಲ್ಕನೇ ಇನಿಂಗ್ಸ್ನಲ್ಲಿ 500 ರನ್ಗಳನ್ನು ಕಲೆಹಾಕಿದ ಇತಿಹಾಸವಿಲ್ಲ. ಇದೀಗ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾಗೆ 549 ರನ್ಗಳ ಗುರಿ ನೀಡಿದೆ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಬಹುದು ಅಥವಾ ಸೌತ್ ಆಫ್ರಿಕಾ ಗೆಲುವು ದಾಖಲಿಸಿಬಹುದು.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.