ಸೌತ್ ಆಫ್ರಿಕಾ ವಿರುದ್ಧ ಗೆಲ್ಲಲು ಟೀಮ್ ಇಂಡಿಯಾ ಏನು ಮಾಡಬೇಕು?
India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್ಗಳಿಸಿ ಆಲೌಟ್ ಆಗಿದೆ. ಇದೀಗ 288 ರನ್ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 288 ರನ್ಗಳ ಮುನ್ನಡೆ ಹೊಂದಿರುವ ಸೌತ್ ಆಫ್ರಿಕಾ ತಂಡವು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಅದರಲ್ಲೂ ಫಾಲೋಆನ್ ಹೇರದೆ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಲು ಕೂಡ ಪ್ಲ್ಯಾನ್ ರೂಪಿಸಲಾಗಿದೆ.
ಅಂದರೆ ಟೀಮ್ ಇಂಡಿಯಾ ಮೇಲೆ ಫಾಲೋಆನ್ ಹೇರದೇ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಅದರಂತೆ ನಾಲ್ಕನೇ ದಿನದಾಟದಲ್ಲಿ ಸೌತ್ ಆಫ್ರಿಕಾ ತಂಡ ಕನಿಷ್ಠ 212 ರನ್ ಕಲೆಹಾಕಿದರೂ ಒಟ್ಟು ಸ್ಕೋರ್ 500 ಆಗಲಿದೆ. ಈ ಮೊತ್ತವನ್ನು ಭಾರತ ತಂಡ ಕೊನೆಯ ಇನಿಂಗ್ಸ್ನಲ್ಲಿ ಚೇಸ್ ಮಾಡಬೇಕಾಗಿ ಬರಬಹುದು. ಆದರೆ 500 ರನ್ಗಳನ್ನು ಚೇಸ್ ಮಾಡಿ ಗೆಲ್ಲುವುದು ಅಸಾಧ್ಯ.
ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಮ್ಯಾಚ್ ಡ್ರಾ ಆದರೆ ಸೌತ್ ಆಫ್ರಿಕಾ ತಂಡ 1-0 ಅಂತರದಿಂದ ಸರಣಿ ಗೆಲ್ಲಲಿದೆ. ಏಕೆಂದರೆ ಎರಡು ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ ಗೆಲುವು ದಾಖಲಿಸಿದೆ. ಹೀಗಾಗಿ ದ್ವಿತೀಯ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೆ ಸರಣಿ ಸೌತ್ ಆಫ್ರಿಕಾ ಪಾಲಾಗಲಿದೆ. ಅಂದರೆ ಸರಣಿಯನ್ನು ಸಮಬಲದಲ್ಲಿ ಅಂತ್ಯಗೊಳಿಸಲು ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕು.
ಭಾರತ ತಂಡ ಗೆಲ್ಲಬೇಕಿದ್ದರೆ ಏನು ಮಾಡಬೇಕು?
ಮೂರನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ ತಂಡ ಒಟ್ಟು 314 ರನ್ಗಳ ಮುನ್ನಡೆ ಹೊಂದಿದೆ. ಈ ಮುನ್ನಡೆಯನ್ನು 460 ದಾಟದಂತೆ ಟೀಮ್ ಇಂಡಿಯಾ ನೋಡಿಕೊಳ್ಳಬೇಕು. ಅಂದರೆ ಸೌತ್ ಆಫ್ರಿಕಾ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ 172 ರನ್ಗಳ ಒಳಗೆ ಆಲೌಟ್ ಮಾಡಬೇಕು.
ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರೆ ಕೊನೆಯ ಇನಿಂಗ್ಸ್ನಲ್ಲಿ ಭಾರತ ತಂಡಕ್ಕೆ 460 ರನ್ಗಳ ಗುರಿ ಸಿಗಬಹುದು. ಇತ್ತ ಸೌತ್ ಆಫ್ರಿಕಾ ತಂಡ ಬೇಗನೆ ಆಲೌಟ್ ಆಗುವುದರಿಂದ ಟೀಮ್ ಇಂಡಿಯಾಗೆ ನಾಲ್ಕನೇ ದಿನದಾಟದ ಮೂರನೇ ಸೆಷನ್ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಕೂಡ ದೊರೆಯಲಿದೆ.
ಈ ಸೆಷನ್ನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ಕನಿಷ್ಠ 100 ರನ್ಗಳಿಸಿದರೆ ಪಂದ್ಯವನ್ನು ಗೆಲ್ಲುವ ಅವಕಾಶ ಸೃಷ್ಟಿಯಾಗಲಿದೆ. ಏಕೆಂದರೆ ನಾಲ್ಕನೇ ದಿನದಾಟದಲ್ಲಿ ಕನಿಷ್ಠ 100 ರನ್ ಕಲೆಹಾಕಿದರೆ, ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಮುಂದಿರುವುದು ಕೇವಲ 350 ರನ್ಗಳ ಟಾರ್ಗೆಟ್.
ಟೆಸ್ಟ್ ಇತಿಹಾಸದಲ್ಲಿ 20 ಬಾರಿ ಕೊನೆಯ ಇನಿಂಗ್ಸ್ನಲ್ಲಿ 400+ ರನ್ಗಳ ಗುರಿ ಬೆನ್ನತ್ತಿದ ಇತಿಹಾಸವಿದೆ. ಇತ್ತ ಟೀಮ್ ಇಂಡಿಯಾದಲ್ಲಿ ಹೊಡಿಬಡಿ ದಾಂಡಿಗರ ದಂಡೇ ಇರುವ ಕಾರಣ ಅಂತಿಮ ದಿನದಾಟದಲ್ಲಿ 350 ರನ್ಗಳ ಗುರಿ ಬೆನ್ನತ್ತುವುದು ಕಷ್ಟಸಾಧ್ಯವೇನಲ್ಲ.
ಇದನ್ನೂ ಓದಿ: ಟ್ರಾವಿಸ್ ಹೆಡ್ ಸಿಡಿಲಬ್ಬರದಿಂದ ಆಸ್ಟ್ರೇಲಿಯಾಗೆ 17 ಕೋಟಿ ರೂ. ನಷ್ಟ!
ಆದರೆ ಇವೆಲ್ಲದಕ್ಕೂ ಮುನ್ನ ಭಾರತೀಯ ಬೌಲರ್ಗಳು ಸೌತ್ ಆಫ್ರಿಕಾ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕನಿಷಠ 170 ರನ್ಗಳ ಒಳಗೆ ಆಲೌಟ್ ಮಾಡಬೇಕಿದೆ. ಇಲ್ಲದಿದ್ದರೆ ಟೀಮ್ ಇಂಡಿಯಾಗೆ ಸರಣಿ ಸೋಲು ಕಟ್ಟಿಟ್ಟ ಬುತ್ತಿ.
Published On - 9:24 am, Tue, 25 November 25
