ಕಳೆದ 2-3 ವರ್ಷಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಭಾರತೀಯ ಕ್ರಿಕೆಟ್ ತಂಡದ (Indian cricket team) ಬೆಂಚ್ ಬಲವನ್ನು ರಾಂಚಿಯಲ್ಲಿ ತೋರಿಸಲಾಯಿತು. ಅಕ್ಟೋಬರ್ 9, ಭಾನುವಾರದಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿತು. ಹಲವು ವರ್ಷಗಳಿಂದ ತಂಡದಲ್ಲಿ ಸ್ಥಾನ ಪಡೆಯಲು ಕಾಯುತ್ತಿದ್ದ ಹಲವು ಪ್ರತಿಭಾವಂತ ಕ್ರಿಕೆಟಿಗರಿಗೆ ಈ ಸರಣಿಯಲ್ಲಿ ಅವಕಾಶ ಸಿಕ್ಕಿದ್ದು, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯುವ ಕ್ರಿಕೆಟಿಗರು ಯಶಸ್ವಿಯಾಗುತ್ತಿದ್ದಾರೆ. ಈಗ ಇದೇ ಯುವ ಆಟಗಾರರನ್ನೊಳಗೊಂಡಿರುವ ಧವನ್ ಪಡೆ ಮಂಗಳವಾರ ನಡೆಯಲ್ಲಿರುವ ಅಂತಿಮ ಹಾಗೂ ಸರಣಿ ನಿರ್ಧಾರಕ ಪಂದ್ಯದಲ್ಲಿ ಸರಣಿ ಗೆಲ್ಲುವ ಸಲುವಾಗಿ ಕಣಕ್ಕಿಳಿಯಲಿದೆ. ಹೀಗಾಗಿ 2ನೇ ಏಕದಿನ ಪಂದ್ಯ ಗೆದ್ದ ಅದೇ ತಂಡವನ್ನು ಧವನ್ ಕಣಕ್ಕಿಳಿಸುತ್ತಾರೋ ಅಥವಾ ತಂಡದಲ್ಲಿ ಬದಲಾವಣೆಗಳನ್ನು ಮಾಡುತ್ತಾರೋ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಲಕ್ನೋ ಮತ್ತು ರಾಂಚಿ ನಂತರ, ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವು ಮಂಗಳವಾರ ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ, ರಾಂಚಿಯಲ್ಲಿ ಭಾರತವು ಶ್ರೇಯಸ್ ಅಯ್ಯರ್ ಅವರ ಶತಕ, ಇಶಾನ್ ಕಿಶನ್ ಅವರ ಅತ್ಯುತ್ತಮ 93 ರನ್ ಮತ್ತು ಮೊಹಮ್ಮದ್ ಸಿರಾಜ್ ಅವರ 3 ವಿಕೆಟ್‌ಗಳ ಆಧಾರದ ಮೇಲೆ 7 ವಿಕೆಟ್‌ಗಳ ಜಯ ಸಾಧಿಸಿತು.
ಬಿಷ್ಣೋಯ್ ವಾಪಸ್?
ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ಅವರಿಗೆ ಆಡುವ XI ನಲ್ಲಿ ಅವಕಾಶ ನೀಡುವ ಮೂಲಕ ಅಚ್ಚರಿ ಮೂಡಿಸಿತ್ತು. ಆದರೆ, ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು. ಹೀಗಿರುವಾಗ ಮೂರನೇ ಪಂದ್ಯದಲ್ಲೂ ಇಬ್ಬರೂ ಕಣಕ್ಕಿಳಿಯುವುದು ಖಚಿತ. ಆದರೆ, ಟಿ20 ವಿಶ್ವಕಪ್‌ಗೂ ಮುನ್ನ ರವಿ ಬಿಷ್ಣೋಯ್ ಅವರನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸಬಹುದಾಗಿದ್ದು, ಅವರಿಗೆ ತಯಾರಾಗಲು ಅವಕಾಶ ನೀಡಬಹುದು. ಹೀಗಾಗಿ ಕುಲ್ದೀಪ್ ಯಾದವ್‌ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಬಹುದು.
ಗಾಯಕ್ವಾಡ್‌ಗೆ ಅವಕಾಶ ಸಿಗುತ್ತಾ?
ರುತುರಾಜ್ ಗಾಯಕ್ವಾಡ್‌ಗೆ ಮತ್ತೆ ಅವಕಾಶ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಮೊದಲ ಪಂದ್ಯದ ವೈಫಲ್ಯದ ನಂತರ ಅವರನ್ನು 2ನೇ ಏಕದಿನ ಪಂದ್ಯದಿಂದ ಕೈಬಿಡಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅಂದಹಾಗೆ ರುತುರಾಜ್ಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿದ್ದು, ಟಿ20 ವಿಶ್ವಕಪ್ಗೆ ಶ್ರೇಯಸ್ ಅಯ್ಯರ್ ಹೋಗಬೇಕಾಗಿರುವುದರಿಂದ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶ ಸಿಗುವ ನಿರೀಕ್ಷೆ ಇದೆ.
ಭಾರತದ ಸಂಭಾವ್ಯ 11:
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ರುತುರಾಜ್ ಗಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್
Published On - 7:36 pm, Mon, 10 October 22